ಕೆಫೆಯಲ್ಲಿ ಬಾಂಬಿಟ್ಟವ ಮುಸಾವೀರ್‌ ಹುಸೇನ್;‌ ಎನ್‌ಐಎ ಸ್ಫೋಟಕ ಮಾಹಿತಿ

Rameshwaram Cafe Blast: ಮಾರ್ಚ್‌ 1 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಇದರಿಂದ ರಾಜಧಾನಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪ್ರಕರಣದ ಆರೋಪಿಗಳಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ, ಬಾಂಬಿಟ್ಟವನು ಯಾರು ಎಂಬುದರ ಕುರಿತು ಎನ್‌ಐಎ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಬೆಂಗಳೂರು, ಏಪ್ರಿಲ್‌ 05 : ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ನಡೆಸಿದ ಬಾಂಬ್‌ ಸ್ಫೋಟ (Blast in Bengaluru) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಕೆಫೆಯಲ್ಲಿ ಬಾಂಬಿಟ್ಟವನು ಯಾರು ಎಂಬುದನ್ನು ಕೊನೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪತ್ತೆಹಚ್ಚಿದೆ. “ಮುಸಾವೀರ್‌ ಹುಸೇನ್‌ ಶಾಜಿಬ್‌ನೇ (Mussavir Hussain Shazib) ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ್ದು” ಎಂಬುದಾಗಿ ಎನ್‌ಐಎ ಪ್ರಕಟಣೆ ತಿಳಿಸಿದೆ.

“ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಮುಸಾವೀರ್‌ ಹುಸೇನ್‌ ಶಾಜಿಬ್‌ ಬಾಂಬಿಟ್ಟವನು ಎಂಬುದಾಗಿ ತನಿಖೆಯಿಂದ ಗೊತ್ತಾಗಿದೆ. ಅಬ್ದುಲ್‌ ಮಥೀನ್‌ ತಾಹಾ ಎಂಬುವನು ಕೂಡ ಪ್ರಕರಣದಲ್ಲಿ ಪ್ರಮುಖ ಪಿತೂರಿದಾರನಾಗಿದ್ದಾನೆ. ಮುಜಾಮಿಲ್‌ ಷರೀಫ್‌ನು ಬಾಂಬ್‌ ತಯಾರಿಸಲು ಇವರಿಗೆ ಹಲವು ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮುಜಾಮಿಲ್‌ ಷರೀಫ್‌ನನ್ನು ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ” ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ. ಮುಸಾವೀರ್‌ ಹುಸೇನ್‌ ಶಾಜಿಬ್‌ ಹಾಗೂ ಈತನಿಗೆ ನೆರವು ನೀಡಿದ ಅಬ್ದುಲ್‌ ಮಥೀನ್‌ ತಾಹಾ ತಲೆಮರೆಸಿಕೊಂಡಿದ್ದು, ಇವರಿಗಾಗಿ ಬಲೆ ಬೀಸಲಾಗಿದೆ.

ಹಿಂದು ಕಾರ್ಯಕರ್ತರ ವಿಚಾರಣೆ
ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಶುಕ್ರವಾರ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಿಂದು ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ಎನ್‌ಐಎ ವಶಕ್ಕೆ ಪಡೆದಿದ್ದು, ಇಬ್ಬರನ್ನೂ ಪ್ರಕರಣದ ಸಾಕ್ಷಿಗಳನ್ನಾಗಿ ಮಾಡಲು ವಿಚಾರಣೆ ಮಾಡಲಾಗುತ್ತಿದೆ. ಕಳೆದ 10 ದಿನಗಳ ಹಿಂದೆ ಮೊಬೈಲ್‌ ಅಂಗಡಿಯ ಇಬ್ಬರು ಯುವಕರನ್ನು ಎನ್‌ಐಎ ವಿಚಾರಣೆ ನಡೆಸಿತ್ತು. ಇದೀಗ ಅವರ ಜತೆ ಸಂಪರ್ಕ ಇದ್ದ ಕಾರಣಕ್ಕೆ ಹಿಂದು ಕಾರ್ಯಕರ್ತನನ್ನೂ ವಿಚಾರಣೆಗೆ ಒಳಪಡಿಸಿರಬಹುದು ಎನ್ನಲಾಗುತ್ತಿದೆ.

ಸಾಯಿ ಪ್ರಸಾದ್ ಹಳೆಯ ಮೊಬೈಲ್ ಅನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಜಾಮಿಲ್‌ಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್‌ನಲ್ಲಿ ಮುಜಾಮಿಲ್ ತಲೆ ಮರೆಸಿಕೊಂಡ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಜತೆ ಸಂಪರ್ಕ ಹೊಂದಿದ್ದ. ಮುಜಾಮಿಲ್ ಬಂಧನದ ವೇಳೆ ಎನ್‌ಐಎ ಮೊಬೈಲ್ ವಶಪಡಿಸಿಕೊಂಡಿತ್ತು. ಪರಿಶೀಲನೆ ವೇಳೆ ಆ ಮೊಬೈಲ್‌ ಸಾಯಿ ಪ್ರಸಾದ್‌ಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ.