ಅಂಕೋಲೆಯ ದಿನಕರ ಪ್ರತಿಷ್ಠಾನದ 40ನೇ ವರ್ಷಾಚರಣೆ

ಅಂಕೋಲಾ: ಸಮಾಜದ ಇಂದಿನ ದುಸ್ಥಿತಿಗೆ ಮಾನವೀಯ ಮೌಲ್ಯಗಳ ಅವಗಣನೆ ಪ್ರಮುಖ ಕಾರಣವಾಗಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ನೈತಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳದಿದ್ದರೆ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋದ ನಿರ್ದೇಶಕ ಹಾಗೂ ಡಾ. ರಾಜಕುಮಾರ ಪ್ರತಿಷ್ಠಾನದ ಸದಸ್ಯ ಕೆ. ಮೋಹನದೇವ ಆಳ್ವ ಹೇಳಿದರು.
ಅವರು ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ ತನ್ನ ಸ್ಥಾಪನೆಯ 40 ನೇ ವರ್ಷಾಚರಣೆಯ ಅಂಗವಾಗಿ ಅಂಕೋಲೆಯ ನಾಡವರ ಭವನದಲ್ಲಿ ಏರ್ಪಡಿಸಿದ ಹಿರಿಯ ಚೇತನಗಳ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.


ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ‘ದಿನಕರ ಪ್ರತಿಷ್ಠಾನ’ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರೆಯುತ್ತಿರುವುದು ಶ್ಲಾಘನೀಯ ಸಂಗತಿಎಂದರು. ತಾನೂ ದೈಹಿಕವಾಗಿ ಉಡುಪಿಯಲ್ಲಿದ್ದರೂ ತಮ್ಮ ಮನಸ್ಸು ಹೃದಯ ಅಂಕೋಲೆಯಲ್ಲಿವೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಮಾತನಾಡಿ, ನಾವೆಲ್ಲ ಕಟ್ಟಿ ಬೆಳೆಸಿದ ದಿನಕರ ಪ್ರತಿಷ್ಠಾನವನ್ನು ಮುಂದುವರೆಸಿಕೊಂಡು ಹೋಗುವುದು ಯುವ ಜನಾಂಗದ ಹೊಣೆಗಾರಿಕೆಯಾಗಿದೆ ಎಂದರು. ದಿನಕರ ಪ್ರತಿಷ್ಠಾನ ಬೆಳೆಸುವಲ್ಲಿ ದಿ. ವಿಷ್ಣು ನಾಯ್ಕರ ಪಾತ್ರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಡಾ. ದಿನಕರ ದೇಸಾಯಿ, ಡಾ. ನಾಗಪ್ಪ ಆಳ್ವ, ಸ.ಪ.ಗಾಂವಕರ, ಡಾ. ಅಮ್ಮೆಂಬಳ ಬಾಳಪ್ಪ, ಸಾಹಿತಿ ವಿಷ್ಣು ನಾಯ್ಕರ ಸ್ಮರಣೆಯ ಕುರಿತು ಉಪನ್ಯಾಸವನ್ನು ಸಿದ್ದಲಿಂಗಸ್ವಾಮಿ, ರಾಮಕೃಷ್ಣ ಗುಂದಿ, ಅರುಣಕುಮಾರ ಹಬ್ಬು, ಶ್ರೀಧರ ನಾಯಕ, ವಿನಾಯಕ ಹೆಗಡೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಮಾತನಾಡಿ, ಪ್ರತಿಷ್ಠಾನಕ್ಕೆ ಆರ್ಥಿಕ ಸಹಾಯ ಮಾಡಿದ ಕೆ.ಮೋಹನದೇವ ಆಳ್ವ ಅವರನ್ನು ಕೃತಜ್ಞತೆಯಿಂದ ಸ್ಮರಿಸಿ ಅವರ ಆಶಯದಂತೆ ಮುಂದಿನ ದಿನಗಳಲ್ಲಿ ಪ್ರತಿಷ್ಠಾನ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ರವೀಂದ್ರ ಕೆಣಿ, ಮಹಾಂತೇಶ ರೇವಡಿ, ಲಲಿತಾ ನಾಯ್ಕ, ಸುಭಾಶ್ ಕಾರೇಬೈಲ್, ಜಗದೀಶ ನಾಯಕ ಹೊಸ್ಕೇರಿ ಇದ್ದರು.