ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿ ಟಿಕೆಟ್‌ ಎಂದ ರಣದೀಪ್‌ ಸುರ್ಜೇವಾಲಾ; ವಿವಾದ

Hema Malini: ನಟಿ ಹೇಮಾಮಾಲಿನಿ ಕುರಿತು ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಅವರು ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯು ನೆಕ್ಕಲು ಹೇಮಾಮಾಲಿನಿಯನ್ನು ಸಂಸದೆಯನ್ನಾಗಿ ಮಾಡುತ್ತಿದೆಯೇ ಎಂಬುದಾಗಿ ಅವರು ಹೇಳಿದ್ದಾರೆ ಎಂದು ವಿಡಿಯೊ ಮೂಲಕ ಬಿಜೆಪಿ ಆರೋಪಿಸಿದ್ದಾರೆ. ಇದಕ್ಕೆ, ರಣದೀಪ್‌ ಸುರ್ಜೇವಾಲಾ ಅವರು ವಿಡಿಯೊ ಮೂಲಕವೇ ತಿರುಗೇಟು ನೀಡಿದ್ದಾರೆ.

ನವದೆಹಲಿ, ಏಪ್ರಿಲ್‌ 04 : ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ವಾದ-ವಾಗ್ವಾದ, ಟೀಕೆ, ವ್ಯಂಗ್ಯ, ಆರೋಪಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ (Randeep Surjewala) ಅವರು ಹೇಮಾಮಾಲಿನಿ (Hema Malini) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿಯವರು ಟಿಕೆಟ್‌ ಕೊಡುತ್ತಾರೆ” ಎಂಬುದಾಗಿ ರಣದೀಪ್‌ ಸುರ್ಜೇವಾಲಾ ನೀಡಿದ ಹೇಳಿಕೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಹಾಗೆಯೇ, ಅವರ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾರ್ಯಕ್ರಮವೊಂದರಲ್ಲಿ ರಣದೀಪ್‌ ಸುರ್ಜೇವಾಲಾ ಅವರು ಮಾತನಾಡಿದ್ದು, “ಶಾಸಕ, ಸಂಸದರನ್ನು ಏಕೆ ಆಯ್ಕೆ ಮಾಡಲಾಗುತ್ತದೆ? ನಮ್ಮ ಧ್ವನಿ ಎತ್ತ, ನಮ್ಮ ಪರವಾಗಿ ಕೆಲಸ ಮಾಡಲು, ನಮ್ಮ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಲು ಆಯ್ಕೆ ಮಾಡಲಾಗುತ್ತದೆ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ” ಎಂಬುದಾಗಿ ಹೇಳಿದ್ದಾರೆ ಎಂದು ಬಿಜೆಪಿಯು ವಿಡಿಯೊ ಹಂಚಿಕೊಂಡಿದೆ.

“ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ ಅವರು ಹೇಮಾಮಾಲಿನಿ ಅವರ ಬಗ್ಗೆ ಮಾತ್ರ ಕೆಟ್ಟ, ಅಶ್ಲೀಲ, ಅಸಹ್ಯಕರವಾದ ಕಮೆಂಟ್‌ ಮಾಡಿಲ್ಲ. ಎಲ್ಲ ಹೆಣ್ಣುಮಕ್ಕಳಿಗೆ ಅವರು ಅವಮಾನ ಮಾಡಿದ್ದಾರೆ. ಒಬ್ಬ ಹೆಣ್ಣುಮಗಳನ್ನು ನೆಕ್ಕುವುದು ಎಂದರೆ ಏನು ಅರ್ಥ? ಯಾರಾದರೂ ಇಷ್ಟು ತುಚ್ಚವಾಗಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಮತ್ತೊಬ್ಬ ಕಾಂಗ್ರೆಸ್‌ ನಾಯಕ, ಬಿಜೆಪಿ ನಾಯಕಿಯ ರೇಟ್‌ ಕೇಳಿದ್ದರು. ಇದು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌. ಹೆಣ್ಣುಮಕ್ಕಳನ್ನು ಅಸಹ್ಯಕರವಾಗಿ ಕಾಣುವ ಪಕ್ಷವಾಗಿದೆ” ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದಾರೆ.

ಬಿಜೆಪಿ ವಿರುದ್ಧ ಸುರ್ಜೇವಾಲಾ ಆಕ್ರೋಶ
ಅಮಿತ್‌ ಮಾಳವೀಯ ಅವರ ಪೋಸ್ಟ್‌ಗೆ ರಣದೀಪ್‌ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ನಾಯಕರಿಗೆ ಸುಳ್ಳು ಮಾಹಿತಿ ಹರಡುವುದು ರೂಢಿಯೇ ಆಗಿದೆ” ಎಂದು ದೂರಿದ್ದಾರೆ. ಹಾಗೆಯೇ, ಹೇಮಾಮಾಲಿನಿ ಅವರ ಕುರಿತು ತಾವು ಮಾತನಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಹೇಮಾಮಾಲಿನಿ ಅವರ ನಮಗೆ ಗೌರವವಿದೆ. ಅವರು ಧರ್ಮೇಂದ್ರ ಅವರನ್ನು ಮದುವೆಯಾಗಿದ್ದಾರೆ ಎಂಬ ಕಾರಣಗೆ ಆ ಗೌರವ ಇನ್ನೂ ಜಾಸ್ತಿ ಇದೆ. ಅಷ್ಟಕ್ಕೂ, ಹೇಮಾಮಾಲಿನಿ ಅವರು ನಮ್ಮ ಸೊಸೆ” ಎಂಬುದಾಗಿ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. ಈ ವಿಡಿಯೊವನ್ನು ಅವರೇ ಹಂಚಿಕೊಂಡಿದ್ದಾರೆ.