ಶಿರಸಿ: ಭಾರೀ ಗಾಳಿ ಮಳೆಯ ಪರಿಣಾಮ ಶಿರಸಿ-ಹೊಸನಗರ ರಾಜ್ಯ ಹೆದ್ದಾರಿಯ ಬನವಾಸಿ ಬಳಿ ಮಂಗಳವಾರ ಮುಂಜಾನೆ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಕಿತ್ತು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮೊಹರಂ ಪ್ರಯುಕ್ತ ಸರಕಾರಿ ರಜೆ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಬಂದ್ ಆದ ಕಾರಣ ತೆರಳುವ ಪ್ರವಾಸಿಗರು, ಪ್ರಯಾಣಿಕರು ಪರದಾಡುವಂತಾಯಿತು.
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಪಡೆ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತಿಯವರು ಮರವನ್ನು ತೆರವುಗೊಳಿಸಿದರು.