ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 10ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಮೂರು ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅಲ್ಲದೆ 59 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ 4 ಫೋರ್ಗಳೊಂದಿಗೆ ಅಜೇಯ 83 ರನ್ ಬಾರಿಸಿದರು. ಈ ಭರ್ಜರಿ ಇನಿಂಗ್ಸ್ನೊಂದಿಗೆ ಕೊಹ್ಲಿ 2 ದಾಖಲೆಗಳನ್ನು ಬರೆದರು.
ಈ ಪಂದ್ಯದಲ್ಲಿ 4 ಸಿಕ್ಸ್ ಸಿಡಿಸುವುದರೊಂದಿಗೆ ಆರ್ಸಿಬಿ ಪರ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಕೊಹ್ಲಿ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (239 ಸಿಕ್ಸ್) ಹೆಸರಿನಲ್ಲಿತ್ತು. ಇದೀಗ 241 ಸಿಕ್ಸ್ಗಳೊಂದಿಗೆ ಆರ್ಸಿಬಿ ತಂಡದ ಸಿಕ್ಸರ್ ಸರದಾರನಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಇನ್ನು 241 ಸಿಕ್ಸ್ಗಳೊಂದಿಗೆ ಐಪಿಎಲ್ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ (239) ನಾಲ್ಕನೇ ಸ್ಥಾನದಲ್ಲಿದ್ದರು. ಇದೀಗ ಧೋನಿಯನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ 357 ಸಿಕ್ಸ್ ಸಿಡಿಸಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.
ಹಾಗೆಯೇ ಈ ಪಂದ್ಯದಲ್ಲಿ ಫೀಲ್ಡಿಂಗ್ ಮೂಲಕವೂ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ವೆಂಕಟೇಶ್ ಅಯ್ಯರ್ ಅವರು ನೀಡಿದ ಕ್ಯಾಚ್ ಹಿಡಿಯುವುದರೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ರೈನಾ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.
205 ಐಪಿಎಲ್ ಪಂದ್ಯಗಳಲ್ಲಿ ಫೀಲ್ಡಿಂಗ್ ಮಾಡಿರುವ ಸುರೇಶ್ ರೈನಾ ಒಟ್ಟು 109 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದೀಗ 240 ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿ (109 ಕ್ಯಾಚ್) ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ಒಂದು ಕ್ಯಾಚ್ ಹಿಡಿದರೆ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಫೀಲ್ಡರ್ ಎನಿಸಿಕೊಳ್ಳಲಿದ್ದಾರೆ.