ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾಚಿ, ಮಾರ್ಚ್ 18 : ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final) ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಪಾಕಿಸ್ತಾನ್ ಸ್ಮೋಕಿಂಗ್ ಲೀಗ್ʼ(Pakistan Smoking League) ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇಸ್ಲಾಮಾಬಾದ್ ಯುನೈಟೆಡ್ ತಂಡದ ಆಲ್ರೌಂಡರ್ ಆಟಗಾರನಾಗಿರುವ ಇಮಾದ್ ವಾಸಿಂ ಅವರು ಫೈನಲ್ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 23 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರಬಹಿಸಿದ್ದರು. ಗೆಲುವಿನ ಹೀರೊ ಎನಿಸಿದ್ದ ಅವರು ಈ ಒಂದು ಘಟನೆಯಿಂದ ನೆಟ್ಟಗರ ಪಾಲಿಗೆ ವಿಲನ್ ಆಗಿದ್ದಾರೆ. ಡ್ರೆಸಿಂಗ್ ರೂಮ್ನಲ್ಲಿ ರಾಜಾರೋಷವಾಗಿ ಸಿಗರೇಟ್ ಸೇದಿರುವ ಬಗ್ಗೆ ಪಾಕ್ ತಂಡದ ಹಲವು ಹಾಲಿ ಮತ್ತು ಮಾಜಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೊಹಮ್ಮದ್ ರಿಜ್ವಾನ್ ಸಾರಥ್ಯದ ಮುಲ್ತಾನ್ ಸುಲ್ತಾನ್ 9 ವಿಕೆಟ್ ವಿಕೆಟ್ಗೆ 159 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ 8 ವಿಕೆಟ್ಗೆ 163 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆದರೆ ಈ ಗೆಲುವಿಗಾಗಿ ಅಂತಿಮ ಎಸೆತದ ವರೆಗೂ ಹೋರಾಟ ನಡೆಸಿತು. ತಂಡದ ಪರ ಮಾರ್ಟಿನ್ ಗಪ್ಟಿಲ್(50) ಅರ್ಧಶತಕ ಬಾರಿಸಿ ಮಿಂಚಿದರು. ಅಜಂ ಖಾನ್(30) ಬಾರಿಸಿದರು. ಇಮಾದ್ ವಾಸಿಂ ಅಜೇಯ 19 ರನ್ ಹೊಡೆದರು.