WPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಶಸ್ತಿ ಗೆಲ್ಲಲು ಗೋಲ್ಡನ್ ಅವಕಾಶವಿದೆ. ಆದರೆ ಅದಕ್ಕಾಗಿ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಬೇಕಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಸ್ಮೃತಿ ಪಡೆ ಐತಿಹಾಸ ನಿರ್ಮಿಸಲಿದೆ.
ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಈಗ ಅಂತಿಮ ಹಂತವನ್ನು ತಲುಪಿದೆ. ಲೀಗ್ ಪಂದ್ಯಗಳಲ್ಲಿ ಡೆಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾರ್ಚ್ 15 ರಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Mumbai Indians vs Royal Challengers Bangalore) ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಶಸ್ತಿ ಗೆಲ್ಲಲು ಗೋಲ್ಡನ್ ಅವಕಾಶವಿದೆ. ಆದರೆ ಅದಕ್ಕಾಗಿ ಆರ್‌ಸಿಬಿ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಬೇಕಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಸ್ಮೃತಿ ಪಡೆ ಐತಿಹಾಸ ನಿರ್ಮಿಸಲಿದೆ. ಹಾಗೆಯೇ ಈ ಗೆಲುವು ಆರ್‌ಸಿಬಿ ಅಭಿಮಾನಿಗಳ 16 ವರ್ಷಗಳ ಕಾಯುವಿಕೆಯನ್ನು ಕೊನೆಗೊಳ್ಳಿಸಲಿದೆ.
16 ವರ್ಷಗಳ ಕಾಯುವಿಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದೆ. ಈ ತಂಡವು ಮೂರು ಬಾರಿ ಐಪಿಎಲ್ ಫೈನಲ್‌ನಲ್ಲಿ ಆಡಿದೆ, ಆದರೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತಂಡದ ಅಭಿಮಾನಿಗಳು ಬಹಳ ಸಮಯದಿಂದ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿಯೂ ನಿರಾಸೆಯೊಂದಿಗೆ ಲೀಗ್ ಕೊನೆಗೊಳ್ಳುತ್ತಿದೆ. ಇದೀಗ ಸ್ಮೃತಿ ಪಡೆ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಪಡೆದುಕೊಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದು ಆರ್‌ಸಿಬಿಗೆ ದೊಡ್ಡ ಸವಾಲಾಗಿದೆ.
ಮುಂಬೈ ವಿರುದ್ಧ ಆರ್‌ಸಿಬಿ ದಾಖಲೆ
ಈ ಬಾರಿಯ ಡಬ್ಲ್ಯುಪಿಎಲ್‌ನಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿವೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಸೀಸನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಆರ್‌ಸಿಬಿ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆ ನಂತರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮಂಧಾನಾ ಸೈನ್ಯವು ಮುಂಬೈ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು.
ಮುಂಬೈ ಸೋಲಿಸುವುದು ಸುಲಭವಲ್ಲ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಅವರ ಆಲ್‌ರೌಂಡರ್ ಪ್ರದರ್ಶನದ ಬಲದ ಮೇಲೆ ಆರ್‌ಸಿಬಿ ಪಂದ್ಯವನ್ನು ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಲೀಗ್ ಮುಗಿಸಿತ್ತು. ಇನ್ನು ಪಾಯಿಂಟ್ ಪಟ್ಟಿಯಲ್ಲಿ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಬೇಕಾದರೆ, ಮುಂಬೈ ತಂಡದ ಅಗ್ರ ಕ್ರಮಾಂಕವನ್ನು ಬೇಗ ಕಟ್ಟಿಹಾಕಬೇಕಿದೆ. ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್ ಮತ್ತು ಹರ್ಮನ್‌ಪ್ರೀತ್ ಕೌರ್‌ರ ಪೈಕಿ ಯಾವುದೇ ಒಬ್ಬ ಬ್ಯಾಟರ್ ಕೊನೆಯ ಓವರ್‌ವರೆಗೆ ಉಳಿದುಕೊಂಡರೆ, ಆರ್ಸಿಬಿಯ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಗೊಳ್ಳುವುದು ಖಚಿತ.
ಅಬ್ಬರಿಸಿದ ಬೇಕಿದೆ ಆರ್‌ಸಿಬಿ
ಇತ್ತ ಕಳೆದೆರಡು ಪಂದ್ಯಗಳಿಂದ ಬ್ಯಾಟಿಂಗ್ನಲ್ಲಿ ಮೌನವಾಗಿರುವ ನಾಯಕಿ ಸ್ಮೃತಿ ಮಂಧಾನ ಅಬ್ಬರದ ಆರಂಭ ನೀಡಬೇಕಿದೆ. ಹಾಗೆಯೇ ಇಡೀ ಟೂರ್ನಿಯಲ್ಲಿ ಮಂಕಾಗಿರುವ ಸೋಫಿ ಡಿವೈನ್ ಈ ಪಂದ್ಯದಲ್ಲಾದರೂ ಮೈಚಳಿ ಬಿಟ್ಟು ಬ್ಯಾಟ್ ಬೀಸಬೇಕಾಗಿದೆ. ಬೌಲಿಂಗ್ನಲ್ಲೂ ಕೂಡ ತಂಡದಲ್ಲಿರುವ ಭಾರತದ ಬೌಲರ್ಗಳು ಮ್ಯಾಜಿಕ್ ಮಾಡುತ್ತಿಲ್ಲ. ಇದು ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಹೀಗಾಗಿ ಮುಂಬೈ ವಿರುದ್ಧ ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದರಷ್ಟೇ ಆರ್‌ಸಿಬಿಗೆ ಫೈನಲ್ಗೇರುವ ಅವಕಾಶ ಸಿಗಲಿದೆ.