ನೀತಿಸಂಹಿತೆ ಉಲ್ಲಂಘನೆ: ಸಚಿವೆ ಹೆಬ್ಬಾಳಕರ್‌ಗೆ ಸಮನ್ಸ್ ಜಾರಿ

ಬೆಳಗಾವಿ  ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಉಮೇಶ ಮಲ್ಲಪ್ಪ ರಾಚಣ್ಣನವರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಐಪಿಸಿ ಕಲಂ 188ರ ಅಡಿ ಸಮನ್ಸ್‌ ಜಾರಿಗೊಳಿಸಿದೆ. 

2024ರ ಮಾ.20 ರಂದು ತಮ್ಮ ಗೃಹ ಕಚೇರಿಯಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಅವರು ಯಾವುದೇ ಅನುಮತಿ ಪಡೆಯದೇ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ್ದರು. ನೂರಾರು ಕಾರ್ಯಕರ್ತೆಯರನ್ನು ಸೇರಿಸಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಸಚಿವರು ತಮ್ಮ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಅರಿತ ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. 

ಅಧಿಕಾರ ದುರುಪಯೋಗ ಮಾಡಿಕೊಂಡು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರೈಯಿಂಗ್ ಸ್ ಕ್ವಾಡ್ ಮುಖ್ಯಸ್ಥ ಮಹಾಂತೇಶ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಉಮೇಶ ಮಲ್ಲಪ್ಪ ರಾಚಣ್ಣನವರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯವು ಸಚಿವೆ ಹೆಬ್ಬಾಳಕರ ಸೇರಿದಂತೆ ಇಬ್ಬರು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಈ ಕುರಿತು ಏ.30ರೊಳಗೆ ಉತ್ತರ ನೀಡುವಂತೆ ಸಮನ್ಸ್‌ನಲ್ಲಿ ಸೂಚನೆ ನೀಡಲಾಗಿದೆ.