ದೇವ್ರೇ ಕ್ಷಮಿಸಪ್ಪಾ; ದೇಗುಲದಲ್ಲಿ ಹುಂಡಿ ಹಣ ಕದಿಯೋ ಮೊದಲು ಕೈಮುಗಿದ ಐನಾತಿ ಕಳ್ಳ, ವಿಡಿಯೊ ಇಲ್ಲಿದೆ

ವ್ಯಕ್ತಿಯೊಬ್ಬ ದೇವಾಲಯಕ್ಕೆ ತೆರಳಿದ್ದಾನೆ. ಅಲ್ಲಿದ್ದ ಕಾಣಿಕೆ ಪೆಟ್ಟಿಗೆ ಮೇಲೆ ಆತನ ಕಣ್ಣು ಬಿದ್ದಿದೆ. ಆ ಕಾಣಿಕೆ ಪೆಟ್ಟಿಗೆಗೆ ಕೈ ಹಾಕುವ ಮೊದಲು ಆತ ದೇವರಿಗೆ ಕೈ ಮುಗಿದಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಜೈಪುರ, ಮಾರ್ಚ್‌ 18 : ಮನಸ್ಸಿನ ಶಾಂತಿಗಾಗಿ, ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು, ನಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ದೇವಸ್ಥಾನಕ್ಕೆ (Temple) ಹೋಗುತ್ತೇವೆ. ದೇವರ ಎದುರು ಕೈಮುಗಿದು, ತಪ್ಪುಗಳನ್ನೆಲ್ಲ ಕ್ಷಮಿಸಿ, ಒಳ್ಳೆಯದು ಮಾಡು ದೇವರೇ ಎಂದು ಬೇಡಿಕೊಳ್ಳುತ್ತೇವೆ. ಆದರೆ, ರಾಜಸ್ಥಾನದಲ್ಲಿ (Rajasthan) ಖತರ್ನಾಕ್‌ ಕಳ್ಳನೊಬ್ಬ ತಪ್ಪು ಮಾಡಲೆಂದೇ ದೇವಸ್ಥಾನಕ್ಕೆ ತೆರಳಿದ್ದಾನೆ. ದೇವಾಲಯದಲ್ಲಿದ್ದ ಕಾಣಿಕೆ ಪೆಟ್ಟಿಗೆಯ (Donation Box) ಹಣ ಕಳ್ಳತನ ಮಾಡುವ ಮೊದಲು ಆತ ದೇವರಿಗೆ ಕೈಮುಗಿದು, ಕ್ಷಮಿಸಪ್ಪಾ ಎಂದು ಬೇಡಿಕೊಂಡಿರುವ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಹೌದು, ರಾಜಸ್ಥಾನದ ಅಲ್ವರ್‌ ಜಿಲ್ಲೆಯ ಆದರ್ಶ ನಗರದಲ್ಲಿರುವ ದೇವಾಲಯದಲ್ಲಿ ಐನಾತಿ ಕಳ್ಳನ ಕೃತ್ಯವೀಗ ಬಯಲಾಗಿದೆ. ಗೋಪೇಶ್‌ ಶರ್ಮಾ (37) ಎಂಬಾತನು ದೇವಾಲಯಕ್ಕೆ ತೆರಳಿದ್ದಾನೆ. ಕಳ್ಳತನ ಮಾಡಲೆಂದೇ ದೇಗುಲ ಪ್ರವೇಶಿಸಿದ ಆತನು, ಕಾಣಿಕೆ ಪೆಟ್ಟಿಗೆ ನೋಡಿದ್ದಾನೆ. ಕಾಣಿಕೆ ಪೆಟ್ಟಿಗೆ ಕೈ ಹಾಕುವ ಮೊದಲು ಆತ ದೇವರಿಗೆ ಕೈಮುಗಿದಿದ್ದಾನೆ. ಮೆಲ್ಲಗೆ ಕಾಣಿಕೆ ಪೆಟ್ಟಿಗೆ ಬಳಿ ತೆರಳಿದ ಆತ, ಅದರಲ್ಲಿರುವ ಹಣವನ್ನು ಎಗರಿಸಿದ್ದಾನೆ. ಹಣವನ್ನು ಜೇಬಿಗೆ ಹಾಕಿಕೊಂಡ ಐನಾತಿಯು ಮತ್ತೆ ಕೈಮುಗಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆಭರಣ ಕಳ್ಳತನ
ದೇವಾಲಯದ ಬಾಗಿಲು ಮುರಿದ ಕಳ್ಳನು ಹಣದ ಜತೆಗೆ ಹಲವು ಆಭರಣಗಳನ್ನೂ ಕಳ್ಳತನ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕಾಣಿಕೆ ಪೆಟ್ಟಿಗೆಯಲ್ಲಿದ್ದ ಹಣ, ಬೆಳ್ಳಿಯ ಆಭರಣಗಳು, ಅಲ್ಲಿದ್ದ ಕೊಡೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ದೇವಾಲಯದಲ್ಲಿ ಈತನು ಕಳ್ಳತನ ಮಾಡುವ ವಿಡಿಯೊ ವೈರಲ್‌ ಆಗುತ್ತಲೇ, ಕೂಡಲೇ ಈತನನ್ನು ಬಂಧಿಸಿ ಎಂದು ಜನ ಆಗ್ರಹಿಸಿದ್ದಾರೆ.

ದೇವಾಲಯಗಳೇ ಈತನ ಟಾರ್ಗೆಟ್
‌ಹಲವು ವರ್ಷಗಳಿಂದ ಕಳ್ಳತನ ಮಾಡುತ್ತಿರುವ ಗೋಪೇಶ್‌ ಶರ್ಮಾಗೆ ದೇವಾಲಯಗಳೇ ಟಾರ್ಗೆ ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ದೇವಾಲಯಗಳ ಬಾಗಿಲು ಮುರಿದು ಒಳಗೆ ಹೋಗುವುದು, ಹುಂಡಿ ಹಣ, ದೇವರಿಗೆ ಅರ್ಪಿಸಿದ ಆಭರಣಗಳು ಸೇರಿ ಕೈಗೆ ಸಿಕ್ಕ ಮೌಲ್ಯಯುತ ವಸ್ತುಗಳನ್ನು ಕದಿಯುವುದು ಈತನಿಗೆ ರೂಢಿಯಾಗಿಬಿಟ್ಟಿದೆ ಎಂದು ಜನ ತಿಳಿಸಿದ್ದಾರೆ. ಇನ್ನು, ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.