RCB Women Champions WPL 2024: ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿದ ನಂತರ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರಿಗೆ ವಿಶೇಷ ವಿಡಿಯೋ ಕರೆ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೈನಲ್‌ನ ಗೆಲುವಿನೊಂದಿಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಫ್ರಾಂಚೈಸ್ ತಮ್ಮ 16 ವರ್ಷಗಳ ಇತಿಹಾಸದಲ್ಲಿ ಅವರ ಮೊದಲ ಪ್ರಶಸ್ತಿಯನ್ನು ಎತ್ತಿಹಿಡಿಯುಡಿದಿದೆ. ಕಳೆದ 16 ವರ್ಷಗಳಿಂದ ಪುರುಷರು ಸಾಧಿಸಲಾಗದ್ದನ್ನ ಮಹಿಳೆಯರು ಕೇವಲ ಎರಡು ವರ್ಷಗಳಲ್ಲಿ ಸಾಧಿಸಿದ್ದಾರೆ. ಮಹಿಳಾ ತಂಡದ ಗೆಲುವು ಆರ್‌ಸಿಬಿ ಪುರುಷರ ತಂಡಕ್ಕೂ ಅತಿ ಸಂತಸ ನೀಡಿದೆ. ಆರ್‌ಸಿಬಿ ಗೆದ್ದ ತಕ್ಷಣ ಖುಷಿ ತಾಳಲಾರದೆ ವಿರಾಟ್ ಕೊಹ್ಲಿ ಅವರು ಸ್ಮೃತಿ ಮಂಧಾನಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.
ಪಂದ್ಯ ಮುಗಿದ ನಂತರ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರಿಗೆ ವಿಶೇಷ ವಿಡಿಯೋ ಕರೆ ಮಾಡಿದ್ದಾರೆ. ಈ ಸಂದರ್ಭ ಬೃಹತ್ ಗೆಲುವು ಮತ್ತು ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸ್ಮೃತಿ ಮಂಧಾನಗೆ ವಿಡಿಯೋ ಕರೆ ಮಾಡಿದ ವಿರಾಟ್ ಕೊಹ್ಲಿ ವಿಡಿಯೋ:
ಅಂತೆಯೆ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಟ್ರೋಫಿ ಗೆದ್ದ ಬಳಿಕ ವಿಶೇಷ ಸಂದೇಶವನ್ನು ಹಂಚಿಕೊಂಡರು. ಅವರು ತಮ್ಮ ಸ್ಟೋರಿಯಲ್ಲಿ ‘ಸೂಪರ್ ವುಮೆನ್’ ಎಂಬ ಶೀರ್ಷಿಕೆ ಬರೆದು ಫೋಟೋ ಹಂಚಿಕೊಂಡಿದ್ದಾರೆ.
ಈ ಬಾರಿಯ ಡಬ್ಲ್ಯೂಪಿಎಲ್ನಲ್ಲೂ ಅನೇಕ ಏಳು-ಬೀಳುಗಳನ್ನು ಕಂಡು ಆರ್‌ಸಿಬಿ ಒಟ್ಟು 8 ಪಂದ್ಯಗಳಿಂದ 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಎಲಿಮಿನೇಟರ್ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಆರಂಭ ಪಡೆಯಿತು. 64 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಬೌಲಿಂಗ್ ಮೂಲಕ ಕಮ್ಬ್ಯಾಕ್ ಮಾಡಿದ ಬೆಂಗಳೂರು, ಡೆಲ್ಲಿಯನ್ನು 113 ಕ್ಕೆ ಆಲೌಟ್ ಮಾಡಿತು.
ಫೈನಲ್ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಿದ ಸ್ಮೃತಿ ಮಂಧಾನ, ರೀಸ್ ಡಿವೈನ್, ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ 30+ ರನ್‌ಗಳಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ, ”ಇಲ್ಲಿ ಟ್ರೋಫಿ ಗೆದ್ದದ್ದು ನಾನೊಬ್ಬನೇ ಅಲ್ಲ; ತಂಡವು ಟ್ರೋಫಿಯನ್ನು ಗೆದ್ದಿದೆ. ನಮ್ಮದು ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಈ ಸಲ ಕಪ್ ನಮ್ದೇ ಎನ್ನುವ ಒಂದು ಕೂಗು ಯಾವಾಗಲೂ ಬರುತ್ತಿದೆ. ಈಗ ಈ ಸಲ ಕಪ್ ನಮ್ದು ಆಗಿದೆ. ಕನ್ನಡ ನನ್ನ ಮೊದಲ ಭಾಷೆಯಲ್ಲ, ಆದರೆ ಅದನ್ನು ಅಭಿಮಾನಿಗಳಿಗೆ ಹೇಳುವುದು ಮುಖ್ಯ,” ಎಂದು ಹೇಳಿದರು.