WPL 2024: ಮುಂಬೈ ವಿರುದ್ಧ ಗೆದ್ದ ಆರ್‌ಸಿಬಿ ಫೈನಲ್‌ಗೆ ಲಗ್ಗೆ; ಈ ಸಲ ಕಪ್‌ ನಮ್ದೆ?

WPL 2024: ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸುವ ಮೂಲಕ ಫೈನಲ್‌ ಪ್ರವೇಶಿಸಿದೆ.

ನವದೆಹಲಿ: ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ ಬೌಲಿಂಗ್‌ನಲ್ಲಿ ಚಾಣಾಕ್ಷತನ ಮೆರೆದ ಆರ್‌ಸಿಬಿ ಮಹಿಳೆಯರ ತಂಡವು (RCB Women) ಮಹಿಳೆಯರ ಪ್ರೀಮಿಯರ್‌ ಲೀಗ್‌ನಲ್ಲಿ (WPL 2024) ಮುಂಬೈ ಇಂಡಿಯನ್ಸ್‌ (Mumbai Indians Women) ವಿರುದ್ಧ ರೋಚಕ ಗೆಲುವು ಸಾಧಿಸಿ ಫೈನಲ್‌ ತಲುಪಿದೆ. ದೆಹಲಿಯ ಅರುಣ್‌ ಜೇಟ್ಲಿ (Arun Jaitley Stadium) ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ನಾರಿಯರ ತಂಡವು ಮುಂಬೈ ವಿರುದ್ಧ 5 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.

ಆರ್‌ಸಿಬಿ ನೀಡಿದ 136 ರನ್‌ಗಳ ಗುರಿ ಬೆನ್ನೆತ್ತುವಲ್ಲಿ ವಿಫಲವಾದ ಹರ್ಮನ್‌ಪ್ರೀತ್‌ ಕೌರ್‌ ಬಳಗವು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 130 ರನ್‌ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಅಮೆಲಿಯಾ ಕೆರ್‌ ಅವರು ಗೆಲುವಿನ ಭರವಸೆ ಮೂಡಿಸಿದರಾದರೂ, ಕೊನೆಯ ಮೂರು ಓವರ್‌ಗಳಲ್ಲಿ ಮ್ಯಾಜಿಕ್‌ ಮಾಡಿದ ಸ್ಮೃತಿ ಮಂಧಾನ ತಂಡವು 5 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಇದರೊಂದಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕುವ ಮುಂಬೈ ಇಂಡಿಯನ್ಸ್‌ ತಂಡದ ಕನಸು ಭಗ್ನಗೊಂಡಂತಾಗಿದೆ. ಇನ್ನು ಇದೇ ಮೊದಲ ಬಾರಿಗೆ ಆರ್‌ಸಿಬಿ ತಂಡವು ಫೈನಲ್‌ ತಲುಪಿದ್ದು, ಭಾನುವಾರ (ಮಾರ್ಚ್‌ 17) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟ್ರೋಫಿಗಾಗಿ ಸೆಣಸಾಡಲಿದೆ.

ಇದಕ್ಕೂ ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ತಂಡವು ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಉತ್ತಮ ಆರಂಭ ಸಿಗದ ಕಾರಣ ತಂಡದ ಮೊತ್ತವು 23 ಆಗುವಷ್ಟರಲ್ಲಿಯೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು. ಭರವಸೆ ಮೂಡಿಸಿದ್ದ ರಿಚಾ ಘೋಷ್‌ ಕೂಡ 14 ರನ್‌ ಗಳಿಸಿ ಔಟಾದರು. ಆಗ ಆರ್‌ಸಿಬಿಯು ಮತ್ತಷ್ಟು ಸಂಕಷ್ಟದ ಸುಳಿಗೆ ಸಿಲುಕಿತು.

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದ ಎಲಿಸ್‌ ಪೆರಿ ಅವರು ಮನಮೋಹಕ ಆಟ ಪ್ರದರ್ಶಿಸಿದರು. ಎಲಿಸ್‌ ಪೆರಿ ಅವರು 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ ಒಳಗೊಂಡು 66 ರನ್‌ ಬಾರಿಸಿದ ಕಾರಣ ಆರ್‌ಸಿಬಿಯು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್‌ ಗಳಿಸಿತು. ಮುಂಬೈ ಇಂಡಿಯನ್ಸ್‌ ಪರ ಹೇಲೆಯ್‌ ಮ್ಯಾಥ್ಯೂಸ್‌, ನ್ಯಾಟ್‌ ಸ್ಕೈವರ್-ಬ್ರಂಟ್‌ ಹಾಗೂ ಸೈಕಾ ಇಶಾಕ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.