VIDEO: ಚೊಚ್ಚಲ ಟ್ರೋಫಿ… ಬೀದಿ ಬೀದಿಗಳಲ್ಲಿ ಹುಚ್ಚೆದ್ದು ಕುಣಿದ RCB ಅಭಿಮಾನಿಗಳು

WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಫ್ರಾಂಚೈಸಿ ಪ್ರಶಸ್ತಿ ಖಾತೆ ತೆರೆದಿದೆ. ಈ ಮೂಲಕ ಕಳೆದ 16 ವರ್ಷಗಳಿಂದ ಆರ್​ಸಿಬಿ ಪಾಲಿಗೆ ಮರೀಚಿಕೆಯಾಗಿದ್ದ ಟ್ರೋಫಿ ಕೊನೆಗೂ ಒಲಿದಿದೆ. ಅತ್ತ ಆರ್​ಸಿಬಿ ತಂಡವು ಚೊಚ್ಚಲ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಇತ್ತ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು. ಆರ್​ಸಿಬಿ ಅಭಿಮಾನಿಗಳ ಈ ಸಂಭ್ರಮದ ವಿಡಿಯೋ ಇಲ್ಲಿದೆ…

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳ 16 ವರ್ಷಗಳ ಕನಸು ಕೊನೆಗೂ ಈಡೇರಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಮೂಲಕ ಆರ್​ಸಿಬಿ ತಂಡವು ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಅತ್ತ ಆರ್​ಸಿಬಿ ಕಿರೀಟ ಮುಡಿಗೇರಿಸಿಕೊಳ್ಳುತ್ತಿದ್ದರೆ, ಇತ್ತ ರಾಯಲ್ ಚಾಲೆಂಜರ್ಸ್​ನ ರಾಯಲ್ ಅಭಿಮಾನಿಗಳು ಸಖತ್ತಾಗಿಯೇ ಸಂಭ್ರಮಿಸಿದ್ದಾರೆ. ಅದು ಕೂಡ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಬುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಕಣಕ್ಕಿಳಿದ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದು… ಎಂಬ ಘೋಷವಾಕ್ಯದೊಂದಿಗೆ ಸಂಭ್ರಮಿಸಿದರು. ಅಲ್ಲದೆ ಹಾಡುಗಳೊಂದಿಗೆ, ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು. ಇದೀಗ ಆರ್​ಸಿಬಿ ಅಭಿಮಾನಿಗಳ ಸಖತ್ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಫೈನಲ್ ಫೈಟ್​:
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ 7 ಓವರ್​ಗಳಲ್ಲಿ 64 ರನ್ ಬಾರಿಸಿ ಉತ್ತಮ ಆರಂಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆ ಬಳಿಕ ಸೋಫಿ ಮೊಲಿನೊ ಆಘಾತ ನೀಡಿದರು. 8ನೇ ಓವರ್​ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಸೋಫಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಇದಾದ ಬಳಿಕ ಲಯಕ್ಕೆ ಮರಳಿದ ಆರ್​ಸಿಬಿ ಬೌಲರ್​ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಅದರಲ್ಲೂ 3.3 ಓವರ್​ಗಳನ್ನು ಎಸೆದು ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿ ಶ್ರೇಯಾಂಕಾ ಪಾಟೀಲ್ ಮಿಂಚಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು.

114 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡಕ್ಕೆ ಸ್ಮೃತಿ ಮಂಧಾನ (31) ಹಾಗೂ ಸೋಫಿ ಡಿವೈನ್ (32) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ ಅಜೇಯ 35 ರನ್ ಬಾರಿಸುವ ಮೂಲಕ 19.3 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆರ್​ಸಿಬಿ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಮೆಗ್ ಲ್ಯಾನಿಂಗ್ (ನಾಯಕಿ) , ಶಫಾಲಿ ವರ್ಮಾ , ಆಲಿಸ್ ಕ್ಯಾಪ್ಸಿ , ಜೆಮಿಮಾ ರೋಡ್ರಿಗಸ್ , ಮರಿಜಾನ್ನೆ ಕಪ್ , ಜೆಸ್ ಜೊನಾಸೆನ್ , ರಾಧಾ ಯಾದವ್ , ಅರುಂಧತಿ ರೆಡ್ಡಿ , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಿಖಾ ಪಾಂಡೆ , ಮಿನ್ನು ಮಣಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕ) , ಸೋಫಿ ಡಿವೈನ್ , ಸಬ್ಬಿನೇನಿ ಮೇಘನಾ , ಎಲ್ಲಿಸ್ ಪೆರ್ರಿ , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಮೊಲಿನೊ , ಜಾರ್ಜಿಯಾ ವಾರೆಹಮ್ , ಶ್ರೇಯಾಂಕಾ ಪಾಟೀಲ್ , ದಿಶಾ ಕಸತ್ , ಆಶಾ ಸೋಭನಾ , ರೇಣುಕಾ ಠಾಕೂರ್ ಸಿಂಗ್.