ಕನ್ನಡಿಗರಿಗೆ ಅನ್ಯಾಯವಾದರೆ ನ್ಯಾಯಬದ್ಧವಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ – ಹನೀಫ್

ಮುಂಡಗೋಡ: ಕನ್ನಡ ಭಾಷೆಗೆ ಅಥವಾ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯವಾದರೂ ನ್ಯಾಯಬದ್ಧವಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಪ್ರವೀಣ ಕುಮಾರ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹನೀಫ್ ಹೇಳಿದರು. ಪಟ್ಟಣದ ಪರಿವೀಕ್ಷಣಾ ಮಂದಿರಲ್ಲಿ ಸೋಮವಾರ ಜರುಗಿದ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ ಇಲ್ಲಿ ಎಲ್ಲ ಭಾಷೆಯ ಜನರು ಇದ್ದಾರೆ. ಹೆತ್ತ ತಾಯಿಗೆ ಪ್ರೀತಿ ತೋರುವಂತೆ ಹೊತ್ತ ಭೂಮಿಯನ್ನೂ ಪ್ರೀತಿ ಮಾಡಬೇಕು. ಕೊನೆಗೂ ನಾವು ಕನ್ನಡದ ಮಣ್ಣಿನಲ್ಲಿ ಮಣ್ಣಾಗುತ್ತೇವೆ ಎಂದರು.

ಪತ್ರಕರ್ತ ನಜೀರುದ್ದೀನ್ ತಾಡಪತ್ರಿ ಮಾತನಾಡಿ ಕನ್ನಡ ನಾಡಿನಲ್ಲಿ ಹುಟ್ಟಿದ ನಮಗೆ ಕನ್ನಡ ಭಾಷೆ ಬಗ್ಗೆ ಗೌರವವಿರಬೇಕು. ಇಂಗ್ಲೀಷ್ ವ್ಯಾಮೋಹ ಕಡಿಮೆಯಾಗಬೇಕು. ಕನ್ನಡಕ್ಕೆ ತಲೆಬಾಗಬೇಕು ಎಂದರು. ಜಿಲ್ಲಾಧ್ಯಕ್ಷ ದೀಪಕ ನಾಯ್ಕ ಮಾತನಾಡಿ ಪ್ರತಿ ಗ್ರಾಮಗಳಲ್ಲಿ ಸಂಘಟನೆಯಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ಆಸಕ್ತಿ ತೋರಬೇಕು ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಪತ್ರಕರ್ತ ಜಗದೀಶ ದೈವಜ್ಞ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿಯಾಗಿ ಮಣಿಕಂಠ ಶೇಟ್ ಹಾಗೂ ರೈತ ಘಟಕದ ಅಧ್ಯಕ್ಷರನ್ನಾಗಿ ರಾಮು ಗೌಳಿ ಅವರನ್ನು ಆಯ್ಕೆ ಮಾಡಲಾಯಿತು.

ಅಂಕೋಲಾ ತಾಲೂಕು ಅಧ್ಯಕ್ಷ ಉದಯ ನಾಯ್ಕ, ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರವೀಣ ಕೊಠಾರಿ, ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ವಿಟನಾಳ ಗ್ರಾ.ಪಂ. ಅಧ್ಯಕ್ಷ ಪ್ರಸಾದ ನಾಯ್ಕ, ಅಜ್ಜಪ್ಪ ಬಾಗೀನದವರ, ವಿರೂಪಾಕ್ಷ ಸಾಗರ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.