ನಾನು ಮಾಜಿಯಾದರೂ ಕೆಲಸಕ್ಕಾಗಿ ನನಗೆ ಕರೆ ಮಾಡಿ ಎಂದ ಪ್ರತಾಪ್​ ಸಿಂಹ

ಪ್ರತಾಪ ಸಿಂಹ ಅವರಿಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಆದ್ರೂ ಪ್ರತಾಪ್‌ ಸಿಂಹ ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ‌ ಮಾಡಿ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ ಎಂದಿದ್ದಾರೆ.

ಮೈಸೂರು, ಮಾರ್ಚ್​​ 14: ಎರಡು ಬಾರಿ ಮೈಸೂರು-ಕೊಡಗು ಸಂಸದನಾಗಿ ಕೆಲಸ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ. ಪ್ರತಾಪ್ ಸಿಂಹ ಬದಲಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ. ನಿನ್ನೆ ಯದುವೀರ ಅವರಿಗೆ ಟಿಕೆಟ್​​ ಘೋಷಣೆ ಬಳಿಕ ಪ್ರತಾಪ್ ಸಿಂಹ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದಿದ್ದರು. ಇದೀಗ ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ‌ ಮಾಡಿ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಯದುವೀರ್​ಗೆ ಟಿಕೆಟ್ ಸಿಗುತ್ತೆಂಬ ಸುದ್ದಿ ಹರಿದಾಡುತ್ತಿದ್ದಾಗ ಪ್ರತಾಪ್ ಸಿಂಹ ಜಾಣತನದಿಂದ ಉತ್ತರಿಸಿದ್ದರು. ಮಹಾರಾಜರನ್ನ ಹೊಗಳುತ್ತಲೇ ಯದುವೀರ್ ಸಂಸದರಾದರೆ ಏನೆಲ್ಲಾ ಆಗಬಹುದು ಎನ್ನುವ ಸಣ್ಣ ಬ್ಲ್ಯೂ ಪ್ರಿಂಟ್ ಸಹ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟಿಕೆಟ್ ಯಾರಿಗೆ ಸಿಗಲಿ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

ನನ್ನ ಓಟು ನೋಟಾಗೆ ಎಂದ ಪ್ರತಾಪ್ ಸಿಂಹ ಅಭಿಮಾನಿ
ಪ್ರತಾಪ್​​ ಸಿಂಹಗೆ ಟಿಕೆಟ್ ಮಿಸ್ ಆದ ಹಿನ್ನೆಲೆ ನೋಟಾಗೆ ನನ್ನ ಓಟು ಹಾಕುವುದಾಗಿ ಆಟೋ ಹಿಂಬದಿಯಲ್ಲಿ ಅಭಿಮಾನಿ ಬರೆಸಿಕೊಂಡಿದ್ದಾರೆ. ಮೈಸೂರಿನ ಹಿನಕಲ್ ನಿವಾಸಿ ಪುನೀತ್ ಎಂಬ ಆಟೋ ಚಾಲಕ ತನಗಾದ ಬೇಸರವನ್ನ ಆಟೋದ ಹಿಂಬದಿಯಲ್ಲಿ ಬರೆಸಿಕೊಂಡು ಓಡಾಡುತ್ತಿದ್ದಾರೆ. ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಳ ಬೇಸರದಿಂದ ಆಟೋದ ಹಿಂದೆ ಹೀಗೆ ಬರೆದುಕೊಂಡಿದ್ದಾರೆ.