ಮಂಗಳೂರು, ಮಾರ್ಚ್ 14 : 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡದ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಿದೆ. ಈ ಬಾರಿ ದಕ್ಷಿಣ ಕನ್ನಡದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ.
ಸುಮಾರು ಹದಿನೈದು ವರ್ಷಗಳಿಂದ ದಕ್ಷಿಣ ಕನ್ನಡದ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ರಾಜಕೀಯ ಜೀವನದಲ್ಲಿ ಬದಲಾವಣೆಯಾಗಲಿದೆ ಎಂದು ತುಳುನಾಡಿನ ದೈವ ಸುಮಾರು ಒಂದು ವಾರಗಳ ಹಿಂದೆಯೇ ಎಚ್ಚರಿಗೆ ನೀಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಒಂದು ವಾರಗಳ ಹಿಂದೆ ನೇಮೋತ್ಸವ ನಡೆದಿತ್ತು. ಸಂಸದ ನಳೀನ್ ಕುಮಾರ್ ಕಟೀಲ್ ಕೂಡ ಈ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ದೈವದ ಆಶೀರ್ವಾದ ಪಡೆಯಲು ಹೋಗಿದ್ದ ನಳೀನ್ ಕುಮಾರ್ ಕಟೀಲ್‌ಗೆ ವಯನಾಟ್ ಕುಲವನ್ ದೈವದ ನೇಮೋತ್ಸವದ ವಿಷ್ಣುಮೂರ್ತಿ ದೈವ ಸೂಚನೆ ನೀಡಿತ್ತು.
‘ನಿನಗೆ ವೈರಿಗಳು ತುಂಬಾನೇ ಇದ್ದಾರೆ. ವೈರಿಗಳು ಎಷ್ಟಿದ್ದರೇನು? ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ. ನೀನು ಹಿಂದುರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ’ ಎಂದು ದೈವ ಎಚ್ಚರಿಕೆಯ ಜೊತೆಗೆ ಅಭಯ ನೀಡಿರುವ ವಿಡಿಯೋ ವೈರಲ್ ಆಗಿದೆ.
ನಳೀನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಲು ಕಾರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಅಸಮಾಧಾನವೇ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣವಾಗಿದೆ. ಪಂಪ್ ವೆಲ್ ಫ್ಲೈ ಓವರ್, ಟೋಲ್ ವಿವಾದ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಆಡಳಿತ ವಿರೋಧಿ ಅಲೆ ಹಬ್ಬಿತ್ತು.
ಇನ್ನು ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿ ನಳೀನ್ ಕುಮಾರ್ ಕಟೀಲ್‌ಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ಕಾರ್ಯಕರ್ತರೇ ಹೈಕಮಾಂಡ್‌ಗೆ ಮನವಿ ಮಾಡಿದ್ದು, ಒಂದು ವೇಳೆ ಟಿಕೆಟ್ ನೀಡಿದರೆ ಪಕ್ಷದ ವಿರುದ್ಧವೇ ತಿರುಗಿ ಬೀಳುವ ಎಚ್ಚರಿಕೆ ನೀಡಿದ್ದರು.
ಇನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿದಾಗಲೂ ನಳೀನ್ ಕುಮಾರ್ ಕಟೀಲ್ ಹಾಗೂ ಪಕ್ಷದ ವಿರುದ್ಧ ಹಿಂದೂ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದರು. ಪರಿಣಾಮ ಅರುಣ್ ಕುಮಾರ್ ಪುತ್ತಿಲ ಪಕ್ಷಾಂತರವಾಗಿ ಸ್ಪರ್ಧಿಸಿ ಬಿಜೆಪಿ ಭದ್ರಕೋಟೆ ಪುತ್ತೂರಿನಲ್ಲೇ ಪಕ್ಷ ಮೂರನೇ ಸ್ಥಾನಕ್ಕಿಳಿಯುವಂತೆ ಮಾಡಿದರು. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲೂ ಇದೇ ಪುನಾರವರ್ತಿತವಾದರೆ ಪಕ್ಷಕ್ಕೆ ದೊಡ್ಡ ನಷ್ಟ ಎಂದರಿತ ಬಿಜೆಪಿ ಹೈಕಮಾಂಡ್ ನಾಯಕರು ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ.