Lok sabha Election 2024 : ಈಶ್ವರಪ್ಪ ಅವರು ಹಿರಿಯರಿದ್ದಾರೆ. ಪಕ್ಷ ಅವರಿಗೆ ಸೂಕ್ತ ಗೌರವ ನೀಡುತ್ತದೆ ಎನ್ನುವ ವಿಶ್ವಾಸ ಇದೆ. ಕುರುಬ ಸಮುದಾಯದೊಂದಿಗೆ ನನಗೆ ಉತ್ತಮ ಸಂಬಂಧ ಇದೆ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.
ಬೆಂಗಳೂರು, ಮಾರ್ಚ್ 13 : ಹಾವೇರಿ ಲೋಕಸಭಾ ಕ್ಷೇತ್ರದ (Haveri Constituency) ಟಿಕೆಟನ್ನು ಕೆ.ಎಸ್. ಈಶ್ವರಪ್ಪ (KS Eshwarappa) ಅವರ ಪುತ್ರ ಕೆ.ಇ ಕಾಂತೇಶ್ (KE Kanthesh) ಅವರಿಗೆ ನೀಡಬೇಕು ಎಂದು ನಾನೇ ಸಂಸದೀಯ ಮಂಡಳಿ ಸಭೆಯಲ್ಲಿ ಕೋರಿಕೆ ಮಂಡಿಸಿದ್ದೆ. ಆದರೆ, ಗೆಲುವಿನ ಲೆಕ್ಕಾಚಾರ ಹಾಕಿದ ವರಿಷ್ಠರು ನನಗೇ ಟಿಕೆಟ್ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಕ್ಷೇತ್ರದ (Lok sabha Election 2024) ಬಿಜೆಪಿ ಟಿಕೆಟ್ ಪಡೆದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ. ಟಿಕೆಟ್ ಘೋಷಣೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಿ ದೇಶವನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕೆಂಬ ಬಯಕೆ ದೇಶಾದ್ಯಂತ ಇರುವಂತೆ ಹಾವೇರಿ ಗದಗ ಕ್ಷೇತ್ರದ ಜನರಲ್ಲಿಯೂ ಇದೆ. ಹೀಗಾಗಿ ನನ್ನನ್ನು ಅತ್ಯಂತ ಹೆಚ್ಚು ಮತದಿಂದ ಗೆಲ್ಲಿಸಿ ಕಳಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಜನರ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿ ಯನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದರು.
ಈಶ್ವರಪ್ಪ ಅವರಿಗೆ ಸೂಕ್ತ ಗೌರವ ಸಿಗಲಿದೆ ಎಂದ ಬೊಮ್ಮಾಯಿ
ಮಾಜಿ ಡಿಸಿಎಂ ಈಶ್ವರಪ್ಪ ಕುರಿತು ಕೇಳಿದ ಪ್ರಶ್ಬೆಗೆ ಉತ್ತರಿಸಿದ ಅವರು, ಅವರು ಸುಮಾರು ಆರು ತಿಂಗಳಿಂದ ಆ ಕ್ಷೇತ್ರದಲ್ಲಿ ಓಡಾಡಿದ್ದಾರೆ. ನಾನು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಕಾಂತೇಶ್ ಅವರಿಗೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೆ. ಪಕ್ಷದ ರಾಷ್ಟ್ರೀಯ ನಾಯಕರು ಗೆಲುವಿನ ಲೆಕ್ಕಾಚಾರ ಇಟ್ಟುಕೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ. ಈಶ್ವರಪ್ಪ ಅವರು ಹಿರಿಯರಿದ್ದಾರೆ. ಪಕ್ಷ ಅವರಿಗೆ ಸೂಕ್ತ ಗೌರವ ನೀಡುತ್ತದೆ ಎನ್ನುವ ವಿಶ್ವಾಸ ಇದೆ. ಕುರುಬ ಸಮುದಾಯದೊಂದಿಗೆ ನನಗೆ ಉತ್ತಮ ಸಂಬಂಧ ಇದೆ ಎಂದು ಹೇಳಿದರು.
ರಾಜಕಾರಣದಲ್ಲಿ ಅನುಭವದ ಜೊತೆಗೆ ಹೊಸ ಯುವಕರಿಗೆ ಅವಕಾಶ ಕೊಡಬೇಕೆಂಬ ಕಾರಣದಿಂದ ಹೊಸ ಮುಖಗಳಿಗೆ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರು ಸ್ಪರ್ದಿಸಬೇಕೆಂಬುದು ಅಲ್ಲಿನ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಇತ್ತು. ಅವರೂ ಮತ್ತು ಈಶ್ವರಪ್ಪ ಅವರ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ಒಳ್ಳೆಯ ಅವಕಾಶ ನೀಡುವ ಸಾಧ್ಯತೆ ಇದೆ. ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ನಾಯಕರು ಪಕ್ಷದಲ್ಲಿ ಯಾವುದೇ ಒಳ ಹೊಡೆತ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.