Yusuf Pathan: ಟೀಮ್ ಇಂಡಿಯಾ ಪರ 57 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಪಠಾಣ್ 810 ರನ್ ಕಲೆಹಾಕಿದ್ದಾರೆ. ಅಲ್ಲದೆ ಬೌಲಿಂಗ್ನಲ್ಲೂ ಮಿಂಚುವ ಮೂಲಕ 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 22 ಟಿ20 ಪಂದ್ಯಗಳನ್ನಾಡಿರುವ ಅವರು 236 ರನ್ ಬಾರಿಸಿದ್ದಾರೆ. ಇದೀಗ ರಾಜಕೀಯದಲ್ಲಿ 2ನೇ ಇನಿಂಗ್ಸ್ ಆರಂಭಿಸಲು ಯೂಸುಫ್ ಪಠಾಣ್ ಮುಂದಾಗಿರುವುದು ವಿಶೇಷ.
ದೇಶದಲ್ಲಿ ಸಾರ್ವತ್ರಿಕ ಚುನಾವಣಾ ಕಣ ರಂಗೇರುತ್ತಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದು, ಇದರ ನಡುವೆ ಅನಿರೀಕ್ಷಿತ ಎಂಬಂತೆ ಟೀಮ್ ಇಂಡಿಯಾ ಮಾಜಿ ಆಟಗಾರ ಯೂಸುಫ್ ಪಠಾಣ್ (Yusuf Pathan) ಹೆಸರು ಚುನಾವಣಾ ಅಂಗಳದಲ್ಲಿ ಕಾಣಿಸಿಕೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಳತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 42 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯೂಸುಫ್ ಪಠಾಣ್ ಹೆಸರು ಕೂಡ ಇರುವುದು ವಿಶೇಷ.
ಯೂಸುಫ್ ಪಠಾಣ್ ಮುಂಬರುವ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬರ್ಹಾಂಪುರ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಕಾಂಗ್ರೆಸ್ನ ಹಾಲಿ ಸಂಸದರ ವಿರುದ್ಧವೇ ಯೂಸುಫ್ ಪಠಾಣ್ ಅವರನ್ನು ಟಿಎಂಸಿ ಕಣಕ್ಕಿಳಿಸಿರುವುದು ವಿಶೇಷ.
ಗುಜರಾತ್ ಮೂಲದ ಯೂಸುಫ್ ಪಠಾಣ್ ಈ ಹಿಂದೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಾದ್ಯಂತ ಪಠಾಣ್ ಜನಪ್ರಿಯರು. ಹೀಗಾಗಿ ಟಿಎಂಸಿ ಪಕ್ಷದ ಕಟ್ಟಾ ವಿಮರ್ಶಕ ಅಧೀರ್ ರಂಜನ್ ಅವರ ವಿರುದ್ಧ ಕೆಕೆಆರ್ ತಂಡದ ಮಾಜಿ ಆಟಗಾರನನ್ನು ಕಣಕ್ಕಿಳಿಸಲಾಗಿದೆ.
ಟಿಎಂಸಿ ಭಾನುವಾರ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಜೊತೆಗಿನ ಒಪ್ಪಂದವನ್ನು ತೃಣಮೂಲ ಕಾಂಗ್ರೆಸ್ ಕಡಿತಗೊಳಿಸಿರುವುದು ಖಚಿತವಾಗಿದೆ. ಅಲ್ಲದೆ ಈ ಹಿಂದೆ ಅಮಾನತುಗೊಂಡ ಸಂಸದ ಮಹುವಾ ಮೊಯಿತ್ರಾ ಅವರನ್ನು ಕೃಷ್ಣನಗರದ ಅಭ್ಯರ್ಥಿ ಎಂದು ಘೋಷಿಸಿದೆ. ಹಾಗೆಯೇ ಬಸಿರ್ಹತ್‌ನಿಂದ ಕಳೆದ ಬಾರಿ ಕಣಕ್ಕಿಳಿದಿದ್ದ ನುಶ್ರತ್ ಜಹಾನ್ ಅವರನ್ನು ಈ ಸಲ ಕೈಬಿಟ್ಟಿದ್ದಾರೆ.
ಡೈಮಂಡ್ ಹಾರ್ಬರ್‌ನಿಂದ ಅಭಿಷೇಕ್ ಬ್ಯಾನರ್ಜಿ, ಜಾದವ್‌ಪುರದಿಂದ ಸಯೋನಿ ಘೋಷ್, ಅಸನ್ಸೋಲ್‌ನಿಂದ ಶತ್ರುಘ್ನ ಸಿನ್ಹಾ, ಬಿರ್‌ಭೂಮ್‌ನಿಂದ ಸತಾಬ್ದಿ ರಾಯ್, ಹೂಗ್ಲಿಯಿಂದ ರಚನಾ ಬ್ಯಾನರ್ಜಿ, ಕೋಲ್ಕತ್ತಾ ದಕ್ಷಿಣದಿಂದ ಮಾಲಾ ರಾಯ್, ಬಸಿರ್‌ಹತ್‌ನಿಂದ ಹಾಜಿ ನೂರುಲ್ ಇಸ್ಲಾಂ ಮತ್ತು ದಮ್‌ನಿಂದ ಸೌಗತಾ ರಾಯ್ ಸ್ಪರ್ಧಿಸಲಿದ್ದಾರೆ.
ಹಾಗೆಯೇ ಬರ್ಹಾಂಪುರ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ರಾಜಕೀಯದಲ್ಲೂ ಹೊಸ ಇನಿಂಗ್ಸ್ ಆರಂಭಿಸಲು ಯೂಸುಫ್ ಪಠಾಣ್ ಮುಂದಾಗಿದ್ದಾರೆ.
ಯೂಸುಫ್ ಪಠಾಣ್ ವೃತ್ತಿಜೀವನ:
ಟೀಮ್ ಇಂಡಿಯಾ ಪರ 57 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಪಠಾಣ್ 810 ರನ್ ಕಲೆಹಾಕಿದ್ದಾರೆ. ಅಲ್ಲದೆ ಬೌಲಿಂಗ್ನಲ್ಲೂ ಮಿಂಚುವ ಮೂಲಕ 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 22 ಟಿ20 ಪಂದ್ಯಗಳನ್ನಾಡಿರುವ ಅವರು 236 ರನ್ ಬಾರಿಸಿದ್ದಾರೆ. ಹಾಗೆಯೇ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದವರಲ್ಲಿ ಯೂಸುಫ್ ಪಠಾಣ್ ಕೂಡ ಒಬ್ಬರು ಎಂಬುದು ವಿಶೇಷ.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ 174 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಯೂಸುಫ್ ಪಠಾಣ್ 1415 ರನ್ ಮತ್ತು 42 ವಿಕೆಟ್ ಕಬಳಿಸಿದ್ದಾರೆ. ಈಗಾಗಲೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಹೇಳಿರುವ ಪಠಾಣ್ ಇದೀಗ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.