PM Modi in Arunachal Pradesh: ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಉದ್ದದ ಸುರಂಗ ಮಾರ್ಗವನ್ನು ಲೋಕಾರ್ಪಣೆ ಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಅರುಣಾಚಲ ಪ್ರದೇಶದಲ್ಲಿ ಮೋದಿ ಏನೇನು ಹೇಳಿದರು? ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ, ಮಾರ್ಚ್ 9: ಇಡೀ ದೇಶದಲ್ಲಿ ಅಭಿವೃದ್ಧಿಯ ಪರ್ವ ತ್ವರಿತ ಗತಿಯಲ್ಲಿ ಮುಂದುವರೆಯುತ್ತಿದೆ. ಇಂದು ಉತ್ತರದ ಎಲ್ಲಾ ರಾಜ್ಯಗಳೊಂದಿಗೆ ಒಟ್ಟಾಗಿ ಅಭಿವೃದ್ಧಿ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿದೆ. ಈಶಾನ್ಯ ಭಾಗದ ಅಭಿವೃದ್ಧಿ ಕುರಿತ ನಮ್ಮ ದೃಷ್ಟಿಕೋನವನ್ನು ‘ಅಷ್ಟಲಕ್ಷ್ಮೀ’ ಎಂದು ಕರೆಯಲಾಗುತ್ತಿದೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದರು. ಅರುಣಾಚಲ ಪ್ರದೇಶದಲ್ಲಿ ಸಿದ್ಧಗೊಂಡಿರುವ, ವಿಶ್ವದ ಅತಿ ಎತ್ತರದಲ್ಲಿ (13000 ಅಡಿ) ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಸೆಲಾ (Sela Tunnel) ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ ನಂತರ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವ್ಯಾಪಾರ, ಪ್ರವಾಸೋದ್ಯಮ, ದಕ್ಷಿಣ ಮತ್ತು ಪೂರ್ವ ಏಷ್ಯಾದ ಇತರ ಸಂಬಂಧಗಳಲ್ಲಿ ನಮಗೆ ಈಶಾನ್ಯವು ಬಲವಾದ ಕೊಂಡಿಯಾಗಲಿದೆ ಎಂದರು.
ಇಂದು ಅರುಣಾಚಲದಲ್ಲಿ ಒಟ್ಟಾಗಿ 55 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಇಂದು ಅರುಣಾಚಲ ಪ್ರದೇಶದ 35 ಸಾವಿರ ಬಡ ಕುಟುಂಬಗಳು ತಮ್ಮ ಶಾಶ್ವತ ಮನೆಗಳನ್ನು ಪಡೆದಿವೆ ಎಂದು ಮೋದಿ ಹೇಳಿದರು.
ಅರುಣಾಚಲ ಪ್ರದೇಶ ಮತ್ತು ತ್ರಿಪುರಾದಲ್ಲಿ ಸಾವಿರಾರು ಕುಟುಂಬಗಳು ನೀರಿನ ನಲ್ಲಿ ಸಂಪರ್ಕ ಪಡೆದಿವೆ. ಈಶಾನ್ಯದ ವಿವಿಧ ರಾಜ್ಯಗಳಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾವು 5 ವರ್ದಲ್ಲಿ ಮಾಡಿದ್ದನ್ನು ಮಾಡಲು ಕಾಂಗ್ರೆಸ್ಗೆ 20 ವರ್ಷ ಬೇಕು: ಮೋದಿ
ಈಶಾನ್ಯ ಭಾಗದ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಎಷ್ಟು ಬಂಡವಾಳ ಹೂಡಿದ್ದೇವೆಯೋ ಅಷ್ಟೇ ಹಣದಲ್ಲಿ ಇಷ್ಟು ಕೆಲಸ ಮಾಡಲು ಕಾಂಗ್ರೆಸ್ ಗೆ 20 ವರ್ಷ ಬೇಕಾಗಬಹುದು ಎಂದು ಪ್ರತಿಪಕ್ಷದ ವಿರುದ್ಧ ಕುಹಕವಾಡಿದರು.
‘ಮಿಷನ್ ಪಾಮ್ ಆಯಿಲ್’ ಗುರಿಯು ಭಾರತವನ್ನು ಖಾದ್ಯ ತೈಲದ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಈಶಾನ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ವಿಶೇಷವಾಗಿ ‘ಮಿಷನ್ ಪಾಮ್ ಆಯಿಲ್’ ಅನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು, ಈ ಮಿಷನ್ ಅಡಿಯಲ್ಲಿ ಮೊದಲ ತೈಲ ಗಿರಣಿಯನ್ನು ಉದ್ಘಾಟಿಸಲಾಗಿದೆ. ಈ ಮಿಷನ್, ಖಾದ್ಯ ತೈಲದ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ ಇಲ್ಲಿನ ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದರು.
ಮೋದಿ ಗ್ಯಾರಂಟಿ ಏನೆಂಬುದನ್ನು ಅರುಣಾಚಲದಲ್ಲಿ ನೋಡಿ: ಪ್ರಧಾನಿ
ಮೋದಿ ಗ್ಯಾರಂಟಿ ಏನು ಎಂಬುದನ್ನು ಅರುಣಾಚಲಕ್ಕೆ ಬಂದರೆ ಸ್ಪಷ್ಟವಾಗಿ ನೋಡಬಹುದು. ಮೋದಿಯವರ ಗ್ಯಾರಂಟಿ ಹೇಗಿದೆ ಎಂಬುದನ್ನು ಇಡೀ ಈಶಾನ್ಯವೇ ನೋಡುತ್ತಿದೆ. ಸ್ವಾತಂತ್ರ್ಯ ಬಂದ ನಂತರ 2014ರವರೆಗೆ 10 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ 6 ಸಾವಿರ ಕಿ.ಮೀ.ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ 7 ದಶಕಗಳಲ್ಲಿ ಮಾಡಿದ ಕೆಲಸವನ್ನು ನಾವು 1 ದಶಕದಲ್ಲಿ ಮಾಡಿದ್ದೇವೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮೈತ್ರಿಕೂಟದ ವಂಶಾಡಳಿತದ ನಾಯಕರು ಮೋದಿ ವಿರುದ್ಧ ತಮ್ಮ ದಾಳಿಯನ್ನು ಹೆಚ್ಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಮೋದಿಯ ಕುಟುಂಬ ಯಾರು ಎಂದು ಕೇಳುತ್ತಿದ್ದಾರೆ. ನಿಂದಿಸುವವರು ಗಮನವಿಟ್ಟು ಆಲಿಸಿ, ಅರುಣಾಚಲದ ಪರ್ವತಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವೂ ಇದು ಮೋದಿಯವರ ಕುಟುಂಬ ಎಂದು ಹೇಳುತ್ತಿದೆ ಎಂದರು.