ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

ಮಾಲೆ ಮಾರ್ಚ್‌ 9 : ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡುವ ಭಾರತೀಯ (India) ಪ್ರವಾಸಿಗರ ಸಂಖ್ಯೆ 33% ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಕಲಹದಿಂದ ಎರಡೂ ದೇಶಗಳ ಸಂಬಂಧ ಹದಗೆಡುತ್ತಲೇ ಇದೆ. ಇದರಿಂದ ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. 2023ರ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಮಾ.4ರ ವೇಳೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಈ ವರ್ಷದ ಮಾ.2ರ ಹೊತ್ತಿಗೆ ಭಾರತೀಯ ಪ್ರವಾಸಿಗರ ಸಂಖ್ಯೆ 27,224 ದಾಖಲಾಗಿದೆ. ಕಳೆದ ವರ್ಷಕ್ಕಿಂತ 13,830 ಕಡಿಮೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲಕ್ಷದ್ವೀಪ (Lakshadweep) ಭೇಟಿಯ ಚಿತ್ರಗಳ ಕುರಿತು ಮಾಲ್ಡೀವ್ಸ್‌ನ ಮೂವರು ಸಂಸದರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ಬಾಯ್ಕಾಟ್ ಮಾಡಲು ಆರಂಭಿಸಿದ್ದರು. ಬಳಿಕ ಭಾರತೀಯ ದ್ವೀಪ ಸಮೂಹವನ್ನು ಬೀಚ್ ಪ್ರವಾಸೋದ್ಯಮ ಮತ್ತು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ತಾಣವಾಗಿ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಇದಾದ ಬಳಿಕ ಮಾಲ್ಡೀವ್ಸ್‌ನ ಮೂವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

ಮಾಲ್ಡೀವ್ಸ್ ಪ್ರವಾಸದ ಬಾಯ್ಕಾಟ್ ಅಭಿಯಾನಕ್ಕೆ ಭಾರತದಲ್ಲಿ ಪ್ರಮುಖ ಚಿತ್ರ ನಟ – ನಟಿಯರು ಬೆಂಬಲವನ್ನು ನೀಡಿದ್ದರು.