ಬೆಂಗಳೂರು ಮಾರ್ಚ್ 9 : ಇಲ್ಲಿನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿಯ ಹೊಸ ಛಾಯಾಚಿತ್ರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಿಡುಗಡೆ ಮಾಡಿದೆ.
ಮಾರ್ಚ್ 3 ರಂದು ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ ಕೈಗೆತ್ತಿಕೊಂಡಿತು. ಮಾರ್ಚ್ 1 ರಂದು ಬೆಂಗಳೂರಿನ ಜನಪ್ರಿಯ ಹೋಟೆಲ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಇರಿಸಿದ್ದ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೋರಿದೆ.
ಕೆಫೆಯಲ್ಲಿ (Bengaluru Cafe Blast) ಸ್ಫೋಟ ಸಂಭವಿಸಿದ ಸುಮಾರು ಒಂದು ಗಂಟೆಯ ನಂತರ ಪ್ರಮುಖ ಶಂಕಿತ ವ್ಯಕ್ತಿ ಬಸ್ ಏರುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ವೀಡಿಯೊದಲ್ಲಿನ ಟೈಮ್‌ಸ್ಟ್ಯಾಂಪ್ ಮಾರ್ಚ್ 1 ರಂದು ಮಧ್ಯಾಹ್ನ 2:03 ಎಂದು ತೋರಿಸಿದೆ. ಸ್ಫೋಟವು ಅಂದು ಮಧ್ಯಾಹ್ನ 12:56 ಕ್ಕೆ ಸಂಭವಿಸಿದೆ. ಶಂಕಿತ ಉಗ್ರ ಟಿ-ಶರ್ಟ್, ಕ್ಯಾಪ್ ಮತ್ತು ಫೇಸ್ ಮಾಸ್ಕ್ ಧರಿಸಿ ಕೆಫೆಯಲ್ಲಿ ಐಇಡಿ ಹೊಂದಿರುವ ಬ್ಯಾಗ್‌ನ್ನು ಬಿಟ್ಟು ಹೋಗುತ್ತಿರುವುದು ಕಂಡುಬಂದಿದೆ.
ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಮತ್ತೊಂದು ದೃಶ್ಯಾವಳಿಯಲ್ಲಿ ಶಂಕಿತ ಉಗ್ರ ಬಸ್ ನಿಲ್ದಾಣದೊಳಗೆ ತಿರುಗಾಡುತ್ತಿರುವುದನ್ನು ಗಮನಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಯನ್ನು ಗುರುತಿಸಲು ಮತ್ತು ಬಂಧಿಸಲು ನೆರವಾಗುವ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರಲು ನಾಗರಿಕರಿಗೆ NIA ಮನವಿ ಮಾಡಿದೆ. ಉಗ್ರನ ಗುರುತು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ.
ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎನ್‌ಐಎ ತನಿಖೆಯಲ್ಲಿ ಸಹಕರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್‌ನ ಬಟ್ಟೆ ವ್ಯಾಪಾರಿ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದೊಂದಿಗೆ ನಂಟಿರುವ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ತನಿಖಾ ತಂಡದ ಪ್ರಕಾರ, ಶಂಕಿತ ಉಗ್ರ ಘಟನೆಯ ನಂತರ ಬಟ್ಟೆ ಬದಲಾಯಿಸಿಕೊಂಡು ತುಮಕೂರು, ಬಳ್ಳಾರಿ, ಬೀದರ್, ಭಟ್ಕಳ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ.