ಅದ್ಧೂರಿಯಾಗಿ ನೆರವೇರಿದ ಬೆಂಗಳೂರು ಐತಿಹಾಸಿಕ ಕರಗ ಶಕ್ತ್ಯೋತ್ಸವ: ಸಿಎಂ, ಡಿಸಿಎಂ​ ಭಾಗಿ, ಇಲ್ಲಿವೆ ಫೋಟೋಸ್

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ತಡರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಕರಗ ಸಾಗಿ ಬರ್ತಿದ್ರೆ, ನೆರೆದಿದ್ದ ಸಹಸ್ರಾರು ಭಕ್ತರು ಮಲ್ಲಿಗೆ ಹೂವು ಅರ್ಪಿಸಿ ಗೋವಿಂದ.. ಗೋವಿಂದ ಅಂತಾ ಜೈಕಾರ ಹಾಕಿದರು. ಸದ್ಯ ನಗರ ಪ್ರದಕ್ಷಿಣೆ ಮಾಡಿ ಧರ್ಮರಾಯಸ್ವಾಮಿ ದೇಗುಲಕ್ಕೆ ಕರಗ ವಾಪಸ್ ಆಗಿದೆ.

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿ, ಕರಗ ಶಕ್ತ್ಯೋತ್ಸವ ಮಹಾರಥೋತ್ಸವಕ್ಕೆ ಶುಭ ಕೋರಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಕೂಡ ಕರಗದ ದರ್ಶನ ಮಾಡಿದ್ದಾರೆ. ಹುಣ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಆದಿಶಕ್ತಿ ದ್ರೌಪದಿಯಮ್ಮನವರ ಐತಿಹಾಸಿಕ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವವನ್ನು ಕಣ್ತುಂಬಿಕೊಂಡರು.

ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯ ದೇಗುಲದಿಂದ ಕರಗ ಹೊತ್ತು ಹೊರಟ ಪೂಜಾರಿ, ಪ್ರಮುಖ ಬೀದಿಗಳಲ್ಲಿ ಸಾಗಿತ್ತು. ದಾರಿಯುದ್ದಕ್ಕೂ ಭಕ್ತರು ಪುಷ್ಪಾರ್ಚನೆ ಮಾಡಿ ಕರಗ ಕಣ್ತುಂಬಿಕೊಂಡರು. ಕೆ.ಆರ್.ಮಾರುಕಟ್ಟೆಯಲ್ಲಿರುವ ಮಸ್ತಾನ್‌ ದರ್ಗಾದಲ್ಲಿ ಸಾಂಪ್ರದಾಯಿಕ ಪೂಜೆ ಕೂಡ ನೆರವೇರಿಲಾಯಿತು. ಇದು ಹಿಂದೂ-ಮುಸ್ಲಿಂ ಸಮುದಾಯಗಳ ಭಾವೈಕ್ಯತೆ ಎತ್ತಿ ತೋರಿಸುತ್ತದೆ.

ದರ್ಗಾದ ಪೂಜಾವರ್ ಫರ್ವೇಜ್ ಪ್ರತಿಕ್ರಿಯಿಸಿದ್ದು, ಪ್ರತಿವರ್ಷ ಕರಗ ದರ್ಗಾಗೆ ಆಗಮಿಸುತ್ತೆ. ವೀರಕುಮಾರರು ದರ್ಗಾಗೆ ಬರುತ್ತಾರೆ. ಪರಸ್ಪರ ಗೌರವ, ಆಶೀರ್ವಾದ ಸಮರ್ಪಣೆ ಮಾಡಲಾಗುತ್ತೆ. ದರ್ಗಾದಲ್ಲಿ ಮೂರು ಸುತ್ತು ಹಾಕಿ ಕರಗ ನಿಂಬೆಹಣ್ಣು ಮಾಡಿ ತೆರಳುತ್ತಾರೆ. ನಮ್ಮ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಒಂದೆಡೆ ಸಾಮರಸ್ಯದಿಂದ ಬೆರೆತು ಕರಗ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಾರೆ ಎಂದಿದ್ದಾರೆ.

ನಸುಕಿನ ಜಾವ 3 ಗಂಟೆಗೆ ಆರಂಭವಾಗಿದ್ದಕರಗ ಶಕ್ತ್ಯೋತ್ಸವ, 15ನೇ ಬಾರಿ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ಕರಗ ಹೊತ್ತರು. ಈ ವೇಳೆ ಶಿಳ್ಳೆ, ಜೈಕಾರ ಮತ್ತು ಮಲ್ಲಿಗೆ ಹೂ ಚೆಲ್ಲಿ ಭಕ್ತರು ಸಂಭ್ರಮಿಸಿದರು.

ಇತ್ತ ಕೋಲಾರದಲ್ಲೂ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದ್ರೌಪತಾಂಭ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಕರಗ ನಡೆಯುವ ದಿನವೇ ಕೋಲಾರ ಕರಗ ಕೂಡ ನಡೆಯುತ್ತೆ.