Rohit Sharma-Sarfaraz Khan: ರೋಹಿತ್ ಶರ್ಮಾ ಅವರ ಕಾಳಜಿಯ ಸ್ವಭಾವವು ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದ ವೇಳೆ ಸರ್ಫರಾಜ್ ಖಾನ್ ಅವರನ್ನು ದೊಡ್ಡ ಅಪಾಯದಿಂದ ಪಾರು ಮಾಡಿತು. ಹಿಂದಿನ ಪಂದ್ಯದಲ್ಲಿ, ರೋಹಿತ್ ಅವರು ಹೆಲ್ಮೆಟ್ ಇಲ್ಲದೆ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡಲು ಪ್ರಯತ್ನಿಸಿದಾಗ ಸರ್ಫರಾಜ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯ ಸಾಧಿಸಿ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಇದರ ನಡುವೆ ಈ ಪಂದ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನಾಯಕ ರೋಹಿತ್ ಶರ್ಮಾ ಅವರ ಕಾಳಜಿಯ ಸ್ವಭಾವವು ಸರ್ಫರಾಜ್ ಖಾನ್ ಅವರ ಪ್ರಾಣವನ್ನು ಉಳಿಸಿತು ಎಂದರೆ ತಪ್ಪಾಗಲಾರದು. ಸರ್ಫರಾಜ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಶೋಯೆಬ್ ಬಶೀರ್ ಹೊಡೆದ ಶಾಟ್ ಅವರ ಹೆಲ್ಮೆಟ್‌ಗೆ ತಗುಲಿತು. ಅದೃಷ್ಟವಶಾತ್, ಸರ್ಫರಾಜ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಪಾರಾದರು.
ಸರ್ಫರಾಜ್ ಹೆಲ್ಮೆಟ್‌ಗೆ ಚೆಂಡು ಬಡಿದ ವಿಡಿಯೋ ಇಲ್ಲಿದೆ ನೋಡಿ:
ಹಿಂದಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್‌ಗೆ ಹೆಲ್ಮೆಟ್ ಧರಿಸುವಂತೆ ರೋಹಿತ್ ಸೂಚಿಸಿದ್ದನ್ನು ಮರೆಯುವಂತಿಲ್ಲ. ರಕ್ಷಣಾತ್ಮಕ ಕವಚ ಇಲ್ಲದೆ ಬ್ಯಾಟ್ಸ್‌ಮನ್‌ನ ಹತ್ತಿರ ಫೀಲ್ಡಿಂಗ್ ಮಾಡಲು ಸರ್ಫರಾಜ್ ಸಿದ್ಧರಾಗಿದ್ದರು. ಇದನ್ನು ಗಮನಿಸಿದ ರೋಹಿತ್ ನಾಲ್ಕನೇ ಟೆಸ್ಟ್ನಲ್ಲಿ ಸರ್ಫರಾಜ್‌ಗೆ ಜೋರು ಮಾಡಿ ಹೆಲ್ಮೆಟ್ ಧರಿಸುವಂತೆ ಹೇಳಿದ್ದರು.
ರೋಹಿತ್ ನಾಲ್ಕನೇ ಟೆಸ್ಟ್ನಲ್ಲಿ ಹೇಳಿದ ಮಾತನ್ನು ಐದನೇ ಟೆಸ್ಟ್ನಲ್ಲೂ ಪಾಲಿಸಿ ಸರ್ಫರಾಜ್ ಖಾನ್ ಅವರು ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ದೊಡ್ಡ ಅಪಾಯದಿಂದ ಪಾರಾದರು. 38ನೇ ಓವರ್‌ನ ಮೂರನೇ ಎಸೆತದಲ್ಲಿ ಈ ಘಟನೆ ನಡೆಯಿತು. ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ ಬ್ಯಾಟರ್ ಶೋಯೆಬ್ ಬಶೀರ್ ಹೊಡೆದ ಶಾಟ್ ವೇಗವಾಗಿ ಮತ್ತು ನೇರವಾಗಿ ಸರ್ಫರಾಜ್ ಅವರ ಹೆಲ್ಮೆಟ್‌ಗೆ ತಗುಲಿದೆ. ಅದೃಷ್ಟವಶಾತ್, ಸರ್ಫರಾಜ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಪಾರಾದರು.
ಈ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ನಿರ್ಣಾಯಕ ಅರ್ಧಶತಕ ಗಳಿಸಿದರು. ಹಾಗೆಯೆ ಭಾರತದ 477 ರನ್‌ಗಳ ದೊಡ್ಡ ಮೊತ್ತದಲ್ಲಿ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿದರು. ಗಿಲ್ 110 ರನ್ ಗಳಿಸಿದರೆ, ರೋಹಿತ್ 162 ಎಸೆತಗಳಲ್ಲಿ 103 ರನ್ ಗಳಿಸಿದರು. 57 ರನ್‌ಗೆ ನಿರ್ಗಮಿಸಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ರೋಹಿತ್ 104 ರನ್‌ಗಳ ಪ್ರಮುಖ ಜೊತೆಯಾಟವನ್ನು ಆಡಿದರು.
ಇದಕ್ಕೂ ಮುನ್ನ ಆರ್. ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಅವರ ಸ್ಪಿನ್ ಬಲೆಗೆ ಬಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್ ಆಯಿತು. ಭಾರತ 477 ರನ್‌ಗಳ ದೊಡ್ಡ ಮೊತ್ತದೊಂದಿಗೆ 259 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ತಂಡವನ್ನು 195 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಇನ್ನಿಂಗ್ಸ್ ಮತ್ತು 64 ರನ್‌ಗಳಿಂದ ಪಂದ್ಯವನ್ನು ಗೆದ್ದಿತು.