ಪುಲ್ವಾಮಾದಿಂದ ಬಂದಿರುವ ಮತ್ತು ಜೇನುಸಾಕಣೆದಾರರಾಗಿರುವ ನಜೀಮ್ ನಜೀರ್ ಅವರು ಉದ್ಯಮಿಯಾಗಿ ತಮ್ಮ ವೃತ್ತಿಪಯಣದ ಬಗ್ಗೆ ಪ್ರಧಾನಿಯೊಂದಿಗೆ (PM Narendra Modi) ಮಾತನಾಡಿದ್ದರು.
ಶ್ರೀನಗರ ಮಾರ್ಚ್ 8 : ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ (Jammu & Kashmir) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸ್ಥಳೀಯ ಉದ್ಯಮಿ (Entrepreneur) ನಜೀಮ್ ನಜೀರ್ (Nazim Nazir) ಎಂಬವರೊಂದಿಗೆ ತೆಗೆಸಿಕೊಂಡ ಸೆಲ್ಫಿ (Selfie) ಈಗ ಟ್ರೆಂಡ್ (viral news) ಆಗಿದೆ. ನಜೀಮ್ ಅವರೊಂದಿಗೆ ಸಂವಾದ ನಡೆಸಿದ ಮೋದಿ ಅವರೊಂದಿಗೆ ತೆಗೆಸಿಕೊಂಡ ಸೆಲ್ಫಿ ಹಂಚಿಕೊಂಡಿದ್ದರು.
“ನನ್ನ ಸ್ನೇಹಿತ ನಜೀಮ್ ಅವರೊಂದಿಗೆ ಸ್ಮರಣೀಯ ಸೆಲ್ಫಿ. ಅವರು ಮಾಡುತ್ತಿರುವ ಒಳ್ಳೆಯ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಸಾರ್ವಜನಿಕ ಸಭೆಯಲ್ಲಿ ಅವರನ್ನು ಭೇಟಿಯಾದಾಗ ಸಂತೋಷಪಟ್ಟು ಸೆಲ್ಫಿಗೆ ವಿನಂತಿಸಿದರು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಪ್ರಧಾನಿ ಮೋದಿ ತಮ್ಮ X ಖಾತೆಯಲ್ಲಿ ಹಾಕಿದ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಗುರುವಾರ ಶ್ರೀನಗರದಲ್ಲಿ ʻವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಮಾತನಾಡಿದರು. ಪುಲ್ವಾಮಾದಿಂದ ಬಂದಿರುವ ಮತ್ತು ಜೇನುಸಾಕಣೆದಾರರಾಗಿರುವ ನಜೀಮ್ ನಜೀರ್ ಅವರು ಉದ್ಯಮಿಯಾಗಿ ತಮ್ಮ ವೃತ್ತಿಪಯಣದ ಬಗ್ಗೆ ಪ್ರಧಾನಿಯೊಂದಿಗೆ ಮಾತನಾಡಿದರು.
2018ರಲ್ಲಿ 10ನೇ ತರಗತಿಯಲ್ಲಿದ್ದಾಗ ತಾನು ಜೇನು ಸಾಕಾಣಿಕೆ ವ್ಯವಹಾರ ಆರಂಭಿಸಿದ್ದಾಗಿ ನಜೀರ್ ಹೇಳಿದ್ದಾರೆ. “ನಾನು ನಮ್ಮ ಮನೆ ಟೆರೇಸ್ ಮೇಲೆ ಎರಡು ಜೇನು ಪೆಟ್ಟಿಗೆಗಳನ್ನು ಇಟ್ಟುಕೊಂಡಿದ್ದೆ. ಶಾಲೆಯಿಂದ ಹಿಂತಿರುಗಿದ ನಂತರ ಟೆರೇಸ್‌ಗೆ ಹೋಗಿ ಜೇನುನೊಣಗಳನ್ನು ನೋಡಿಕೊಳ್ಳುತ್ತಿದ್ದೆ. 10ನೇ ತರಗತಿ ಮುಗಿದ ನಂತರ ಇದನ್ನು ಹೇಗೆ ವ್ಯಾಪಾರವಾಗಿ ಪರಿವರ್ತಿಸಬಹುದು ಎಂದು ಯೋಚಿಸಲು ಪ್ರಾರಂಭಿಸಿದೆ” ಎಂದಿದ್ದಾರೆ ನಜೀಮ್.
“ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ (ಪಿಎಂಇಜಿಪಿ) 5 ಲಕ್ಷ ಸಾಲ ಪಡೆದಿದ್ದೇನೆ. ಇದರೊಂದಿಗೆ ಶೇ.50ರಷ್ಟು ಸಹಾಯಧನದಲ್ಲಿ 25 ಜೇನು ಪೆಟ್ಟಿಗೆಗಳನ್ನು ಖರೀದಿಸಿದೆ. ಮೊದಲು ನಾನು 75 ಕೆಜಿ ಜೇನುತುಪ್ಪವನ್ನು ಹೊರತೆಗೆದೆ. ಈ ಜೇನುತುಪ್ಪವನ್ನು ನನ್ನ ಹಳ್ಳಿಯಲ್ಲಿ ಮಾರಿ 60,000 ರೂ. ಗಳಿಸಿದೆ. ಇದು ನನ್ನ ಮೊದಲ ಆದಾಯ. ನನ್ನ ಕುಟುಂಬಕ್ಕೆ ಇದರಿಂದ ಸಂತೋಷವಾಯಿತು” ಎಂದು ನಜೀಮ್ ಹೇಳಿದ್ದರು.
ನಂತರ ನಜೀಮ್ ತಮ್ಮ ವೆಬ್‌ಸೈಟ್ ಅನ್ನು 2020ರಲ್ಲಿ ಪ್ರಾರಂಭಿಸಿದರು. ಈಗ ಪ್ರತಿ ವರ್ಷ 1000 ಕೆಜಿ ಜೇನುತುಪ್ಪವನ್ನು ಮಾರಾಟ ಮಾಡುತ್ತಾರೆ. “2023ರಲ್ಲಿ ನಾನು 2000 ಜೇನು ಪೆಟ್ಟಿಗೆಗಳನ್ನು ಹೊಂದಿದ್ದೆ. 5,000 ಕೆಜಿ ಜೇನುತುಪ್ಪವನ್ನು ಮಾರಾಟ ಮಾಡಿದ್ದೇನೆ” ಎಂದಿದ್ದಾರೆ. ಈಗ ಅವರೊಂದಿಗೆ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.
“ನಾವು ಶ್ವೇತ ಕ್ರಾಂತಿ ಮತ್ತು ಹಸಿರು ಕ್ರಾಂತಿಯ ಬಗ್ಗೆ ಕೇಳಿದ್ದೇವೆ. ಆದರೆ ಇಂದು ನಜೀಮ್ ಅವರಂತಹ ಯುವಕರಿಂದಾಗಿ ನಮ್ಮ ಕಾಶ್ಮೀರವು ಸಿಹಿ ಕ್ರಾಂತಿಗೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ, ನಜೀಮ್ ಅವರನ್ನು ಶ್ಲಾಘಿಸಿದರು.
ನಂತರ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನಜೀಮ್, “ಪ್ರಧಾನಿ ಮೋದಿ ಅವರು ನನ್ನ ವೃತ್ತಿಪ್ರಯಾಣದ ಬಗ್ಗೆ ಕೇಳಿದರು. ಕೆಲವು ಸಲಹೆಗಳನ್ನು ನೀಡಿದರು. ಕೊನೆಯಲ್ಲಿ, ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಯವರಿಗೆ ವಿನಂತಿಸಿದೆ. ಅವರು ನನ್ನ ಕೋರಿಕೆಯನ್ನು ಪೂರೈಸಿದರು. ಅದು ನಿಜವಾಗಿಯೂ ಸುಂದರ ಕ್ಷಣ” ಎಂದಿದ್ದಾರೆ ನಜೀಮ್. “ಇಂದು ಸರ್ಕಾರ ನಮಗೆ ಬೆಂಬಲ ನೀಡುತ್ತಿದೆ. ಆನ್‌ಲೈನ್‌ನಲ್ಲಿ ಹಲವಾರು ಯೋಜನೆಗಳಿವೆ. ಅದಕ್ಕಾಗಿ ನೀವು ಯಾರ ನೆರವನ್ನೂ ಬೇಡುವ ಅಗತ್ಯವಿಲ್ಲ” ಎಂದಿದ್ದಾರೆ.
ಆಗಸ್ಟ್ 5, 2019ರಂದು ಕೇಂದ್ರವು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಪ್ರಧಾನಿ ಮೋದಿಯವರು ನಿನ್ನೆ ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಶ್ರೀನಗರದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಈ ಕೇಂದ್ರಾಡಳಿತ ಪ್ರದೇಶದಲ್ಲಿ ಕೃಷಿ-ಆರ್ಥಿಕತೆಯನ್ನು ಉತ್ತೇಜಿಸಲು ಸುಮಾರು 5,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.