DA Hiked: ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ತುಟ್ಟಿ ಭತ್ಯೆಯ ಜತೆಗೆ ಮನೆ ಬಾಡಿಗೆ ಅಲೋವನ್ಸ್ (HRA) ಹಾಗೂ ಗ್ರ್ಯಾಚುಟಿ ಮೊತ್ತವನ್ನು ಸಹ ಏರಿಕೆ ಮಾಡಲಾಗಿದೆ.
ನವದೆಹಲಿ, (ಮಾರ್ಚ್ 07): ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (Dearness allowance ) ಹೆಚ್ಚಳ ಮಾಡಿದೆ. 2024ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇಕಡಾ 4ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
ಈಗ ನೌಕರರಿಗೆ ನೀಡುತ್ತಿರುವ ತುಟ್ಟಿಭತ್ಯೆಯು ಶೇ.50ರಷ್ಟು ಆಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರು ಹಾಗೂ ಪಿಂಚಣಿದಾರರಿಗೆ ಭರ್ಜರಿ ಅನುಕೂಲವಾಗಲಿದೆ. ಇನ್ನು ತುಟ್ಟಿ ಭತ್ಯೆಯ ಜತೆಗೆ ಕೇಂದ್ರ ಸರ್ಕಾರವು ಮನೆ ಬಾಡಿಗೆ ಅಲೋವನ್ಸ್ (HRA) ಕೂಡ ಏರಿಕೆ ಮಾಡಿದೆ. ಅಷ್ಟೇ ಅಲ್ಲ, ಗ್ರ್ಯಾಚುಟಿ ಮೊತ್ತವನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 12,868 ಕೋಟಿ ರೂಪಾಯಿ ಹೆಚ್ಚುವರಿ ಹೊರೆಬೀಳಲಿದೆ.
2023ರ ಮಾರ್ಚ್‌ನಲ್ಲೂ ಕೇಂದ್ರ ಸರ್ಕಾರವು ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿತ್ತು. ಇದರಿಂದ ನೌಕರರಿಗೆ ಸಿಗುವ ತುಟ್ಟಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು. ಅಲ್ಲದೆ, ಕಳೆದ ವರ್ಷದ ಜುಲೈನಲ್ಲಿ ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.42ರಿಂದ ಶೇ.46ಕ್ಕೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಶೇ.4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ತುಟ್ಟಿಭತ್ಯೆಯು ಶೇ.50ರಷ್ಟು ಆಗಿದೆ.
ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುತ್ತದೆ. ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಇದು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.