‘ಸ್ಪರ್ಶ’ ಚಿತ್ರದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’ ಮತ್ತು ‘ಚಂದಕಿಂತ ಚಂದ ನೀನೇ ಸುಂದರ..’ ಗೀತೆಗಳು ಪಂಕಜ್ ಉಧಾಸ್ ಅವರ ಕಂಠದಲ್ಲಿ ಮೂಡಿಬಂದಿದ್ದವು. ಇಂದು ಪಂಕಜ್ ಉಧಾಸ್ ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಜನಪ್ರಿಯ ಗಾಯಕ ಪಂಕಜ್ ಉಧಾಸ್ ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆಬ್ರವರಿ 26) ಕೊನೆಯುಸಿರು ಎಳೆದರು. ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದಾರೆ. 1980ರ ದಶಕದಲ್ಲಿ ಪಂಕಜ್ ಉಧಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು.
ಪಂಕಜ್ ಉಧಾಸ್ ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡುಗಳು ಪಂಕಜ್ ಉಧಾಸ್ ಅವರ ಕಂಠದಲ್ಲಿ ಮೂಡಿಬಂದಿದ್ದವು. ಕೇಳುಗರ ಫೇವರಿಟ್ ಲಿಸ್ಟ್ನಲ್ಲಿ ಈ ಹಾಡುಗಳು ಈಗಲೂ ಜಾಗ ಪಡೆದುಕೊಂಡಿವೆ. ಪಂಕಜ್ ಉಧಾಸ್ ಅವರ ಅಗಲಿಕೆಗೆ ಕರುನಾಡಿನಲ್ಲಿನ ಅಭಿಮಾನಿಗಳು ಕೂಡ ಕಂಬಿನಿ ಮಿಡಿಯುತ್ತಿದ್ದಾರೆ.