ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಯುವ ಬ್ರಿಗೇಡ್‌ ವತಿಯಿಂದ ಅಘನಾಶಿನಿ ಆರತಿ

ಕುಮಟಾ : ಕಾಶಿಯಲ್ಲಿ ಗಂಗಾರತಿ ನಡೆಯೋದನ್ನು ನೀವು ನೋಡೀರ್ತೀರಿ. ಆದ್ರೆ ನಮ್ಮ ಕುಮಟಾದಲ್ಲಿ ಯುವ ಬ್ರಿಗೇಡ್‌ ವತಿಯಿಂದ ಅಘನಾಶಿನಿ ಆರತಿ ವಿಜೃಂಭಣೆಯಿಂದ ಜರುಗಿತು. ಈ ಬಗ್ಗೆ ನುಡಿಸಿರಿ ವಾಹಿನಿ ಮಾಡಿದ ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ…

ಸುತ್ತಲೂ ಕಿಕ್ಕಿರಿದ ಜನರು… ಹಿನ್ನೆಲೆಯಲ್ಲಿ ದೇವರ ಸ್ತುತಿಯ ಹಾಡು.. ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಚೌಕಟ್ಟಿನ ಮಧ್ಯೆ ಯುವಕ, ಯುವಕರಿಂದ ಬೆಳಕಿನ ಆರತಿ. ನದಿಯ ಮಡಿಲಲ್ಲಿ ಆರತಿಯ ಸ್ತುತಿ.. ಥೇಟ್ ವಾರಣಾಸಿಯ ಗಂಗಾ ನದಿ ದಡದಂತೆಯೇ ವಾತಾವರಣ ನಿರ್ಮಾಣವಾಗಿತ್ತು. ಈ ಅದ್ದೂರಿ ದೃಶ್ಯಕಂಡು ಬಂದಿದ್ದು ಕುಮಟಾ ತಾಲೂಕಿನ ಅಘನಾಶಿನಿಯಲ್ಲಿ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡ‌ ತಮ್ಮೂರಿನ ಜೀವನದಿ ಅಘನಾಶಿನಿಗೆ ಆರತಿ ಬೆಳಗಿದ ಅಪರೂಪದ ಕ್ಷಣ. ಅದ್ಹೇಗೆ ವಾರಣಾಸಿಯಲ್ಲಿ ಗಂಗಾರತಿ ನಡೆಯುತ್ತೋ ಅದೇ ರೀತಿಯ ಸಂಭ್ರಮ ಅಘನಾಶಿನಿ ದಡದಲ್ಲೂ ಕಳೆಗಟ್ಟಿತ್ತು…

ಅತ್ತ ನದಿಯು ಶಾಂತವಾಗಿ ಹರಿಯುತ್ತಿದ್ರೆ, ಇತ್ತ ದಡದಲ್ಲಿ ನಿಂತು ಯುವಕ, ಯುವತಿಯರು ಹಳದಿ ವಸ್ತ್ರ ಧರಿಸಿ ಅಘನಾಶಿನಿಗೆ ಆರತಿ ಎತ್ತಿ ಕೃತಜ್ಞತೆ ಸಲ್ಲಿಸಿದರು. ನೆರೆದ ಸಾವಿರಾರು ಜನರು ಈ ಕ್ಷಣವನ್ನ ಕುತೂಹಲದಿಂದ ಕಣ್ತುಂಬಿಕೊಂಡರು. ಕರಾವಳಿಯಲ್ಲಿ ನಡೆಯುವ ಈ ಆರತಿಯು ಗಂಗೆಗೆ ನಡೆಯುವ ಆರತಿಯಂತೆ ಜನ ಖುಷಿಪಟ್ಟರು…

ಕೊನೆಗೂ ತಮ್ಮ ಜೀವನಾಡಿಯಾದ ಜೀವನದಿಗೆ ಆರತಿ ಬೆಳಗಿ ಅಘನಾಶಿನಿಗೆ ಚಿನ್ನದ ಹೊಳಪು ನೀಡಿದರು. ನದಿಯ ನಾಲ್ಕೂ ದಿಕ್ಕಿನಲ್ಲಿ ದೀಪಾಲಂಕಾರ ಮಾಡಿ ಬಿಳಿ ಬಟ್ಟೆ ಉಟ್ಟುಕೊಂಡು ಹೂವನ್ನು ಸಮರ್ಪಿಸಿ ನಂತರ ಸಾವಿರಾರು ಜನರ ನಡುವೆ ಸುಮಾರು 10 ನಿಮಿಷಗಳ ಕಾಲ ಆರತಿ ಮಾಡಲಾಯಿತು…

ಈ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಅಘನಾಶಿನಿ ನದಿಯ ಮಹತ್ವ ತಿಳಿಸುತ್ತ, ಬೆಲೆ ಕಟ್ಟಲಾಗದ ಅಮೂಲ್ಯ ಸಂಪತ್ತು ಎಂದರೆ, ಪ್ರಕೃತಿ ಮಾತೆ ನಮಗೆ ನೀಡಿದ ಜಲವಾಗಿದೆ. ಇದರ ಸದ್ಬಳಕೆ ಹಾಗೂ ಸ್ವಚ್ಛತೆಯ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದ್ರು…

ಸಾನಧ್ಯವಹಿಸಿದ್ದ ಗೋಕರ್ಣ ಸಂಸ್ಥಾನದ ವಿದ್ಯಾದೀಶತೀರ್ಥ ಶ್ರೀಪಾದ್‌ ವಡೇರ ಶ್ರೀಗಳು, ಅಘನಾಶಿನಿ ನದಿ ಎಷ್ಟೋ ಪೂರ್ವಜರನ್ನು ನೋಡಿದೆ. ಅನೇಕ ಕಾಲಘಟ್ಟವನ್ನು ನೋಡಿದೆ. ಈಗ ಅಘನಾಶಿನಿ ಆರತಿ ಸಮಾರಂಭ ನೋಡಿ ಖುಷಿ ಪಟ್ಟಿದ್ದಾಳೆ ಎಂದು ಹೇಳಿದ್ರು…

ಇನ್ನು ಶಿರಸಿಯ ಶಂಕರಹೊಂಡದಲ್ಲಿ ಜನಿಸಿ ಕುಮಟಾ ಮಾರ್ಗವಾಗಿ ಕಡಲು ಸೇರುವ ಅಘನಾಶಿನಿ ಇದರ ಮಧ್ಯೆ ಜಲಪಾತವಾಗಿ, ಅಬ್ಬಿನೀರಾಗಿ, ಪಾವನತೀರ್ಥವಾಗಿ ಹರಿಯುತ್ತಾಳೆ. ಅಷ್ಟೇ ಅಲ್ಲ ಶಿರಸಿಯ ಮಂಜುಗುಣಿಯಲ್ಲಿ ಪಾಪನಾಶಿನಿಯಾಗಿಯೂ ಹರಿಯುತ್ತಾಳೆ. ಇಂತಹ ಜೀವನದಿಗೆ ಯುವಾ ಬ್ರಿಗೇಡ್ ಯುವಕರ ತಂಡವು ಹಲವು ವರ್ಷಗಳಿಂದ ಈ ರೀತಿ ಕಾರ್ಯಕ್ರಮ ಮಾಡಬೇಕೆಂದು ಯೋಜನೆ ರೂಪಿಸಿ, ಈಗ ಎರಡು ವರ್ಷಗಳಿಂದ ಕಾರ್ಯಗತಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ…