ಮದುವೆ ಮನೆಯಲ್ಲಿ ಮೊಳಗಿದ ಅಕ್ಷರ ಕಲರವ – ತಾಳಿ ಕಟ್ಟುವ ಶುಭ ವೇಳೆ ಕವನ ಸಂಕಲನ ಲೋಕಾರ್ಪಣೆ

ಭಟ್ಕಳ : ಮದುವೆ ಅಂದ್ರೆ, ಅದರ ಕಲ್ಪನೆಯೇ ಬೇರೆ. ಸುತ್ತಲೂ ಕಂಗೊಳಿಸುವ ಪೆಂಡಾಲ್, ಡಿಜೆ ಹಾಡುಗಳು, ಮದುಮಕ್ಕಳಷ್ಟೆ ಚೆಂದವಾಗಿ ಕಾಣುವ ಯುವಕ ಯುವತಿಯರು. ಇನ್ನೂ ಬಂದು ಬಳಗದ ಸಮಾಗಮ, ಇವು ಮದುವೆ ಬಗ್ಗೆ ಇರುವ ಕಲ್ಪನೆಗಳು. ಆದ್ರೆ ಭಟ್ಕಳದ ಮುಗಳಿಕೋಣೆಯ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭ ಅಪರೂಪದಲ್ಲಿ ಬಲು ಅಪರೂಪವಾಗಿತ್ತು…



ಕಲ್ಯಾಣ ಮಂಟಪದಲ್ಲಿ ಒಂದೆಡೆ ಮದುವೆ ಸಂಭ್ರಮ ಮನೆ ಮಾಡಿದೆ. ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ನವ ಜೋಡಿಗೆ ಬಂಧುಗಳು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಮತ್ತೊಂದೆಡೆ ಅದೇ ಕಲ್ಯಾಣ ಮಂಟಪದಲ್ಲಿ ಬೆಳಕೆಯ ಮದ್ದಾರಮನೆಯ ಯುವ ಸಾಹಿತಿ ಗಣಪತಿ ನಾಯ್ಕ ರಚಿಸಿದ ನೀ ಬರೆಸಿದಂತೆ ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ.ಸೈಯದ್ ಜಮೀರುಲ್ಲಾ ಷರೀಫ್ ಅವರ ಅಭಯ ಹಸ್ತದಿಂದ ಬಿಡುಗಡೆಗೊಳಿಸಿದ್ದಾರೆ…

ವೃತ್ತಿಯಲ್ಲಿ ವರ‌ ಗಣಪತಿ ನಾಯ್ಕ ರೇಡಿಯಮ್ ಡಿಸೈನಿಂಗ್ ಮಾಡುತ್ತಿದ್ದು, ತಮ್ಮ ಬಿಡುವಿನ ವೇಳೆ ಚುಟುಕು ಕವನ ಬರೀತಾರೆ. ಅಷ್ಟೇ ಅಲ್ಲ.. ಬಡವರಿಗೆ ನಿರ್ಗತಿಕರಿಗೆ ತಮ್ಮ ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಸಹಾಯ ಮಾಡೋ ಗುಣ ಬೆಳೆಸಿಕೊಂಡಿದ್ದಾರೆ. ಇದೀಗ ತಮ್ಮ ಮದುವೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ 500 ಪುಸ್ತಕವನ್ನು ಪ್ರಕಟಿಸಿದ್ದು, ಈ ಪುಸ್ತಕವನ್ನು ಮಾರಾಟ ಮಾಡಿ ಬಂದಂತ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.

ಗಣಪತಿ ನಾಯ್ಕ ಅವರಿಗೆ ಧರ್ಮ ಪತ್ನಿ ಚಾರ್ಟೆಡ್ ಅಕೌಂಟೆಂಟ್ ಉದ್ಯೋಗಿಯಾಗಿರುವ ವಿಮಲಾ ನಾಯ್ಕ ಕೂಡ ಸಾಥ್ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಮೊದಲು ಶಿಕ್ಷಣ ಕಲಿಸಿದ್ದ ಶಿಕ್ಷಕ ಶಿವರಾಮ ಮೊಗೇರ್ ಮತ್ತು ಹಿರಿಯ ಸಾಹಿತಿ ಡಾ.ಸೆಯದ್ ಜಮೀರುಲ್ಲಾ ಷರೀಫ್ ಹಾಗೂ ರಾಷ್ಟ್ರೀಯ ಮಾನವ ಸಂಪನ್ಮೂಲ ಮತ್ತು ಉದ್ಯೋಗಿಗಳ ಸಂಬಂಧ ವ್ಯವಸ್ಥಾಪಕರಾದ ಆದ ಲಕ್ಷ್ಮಣ ಜಿಂಗಿ ಅವರಿಗೆ ಸನ್ಮಾನಿಸಿ ಗೌರವಿಸಿದ್ರು.

ಒಟ್ನಲ್ಲಿ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ಜೋಡಿ, ತಮ್ಮ ಮದುವೆ ಸಮಾರಂಭದಲ್ಲೂ ಪರೋಪಕರಾದ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಮದುವೆ ಸಮಾರಂಭದಲ್ಲೇ ಕವನ ಸಂಕಲನ ಲೋಕಾರ್ಪಣೆಗೊಳಿಸಿ, ಸಮಾಜ ಸೇವೆ ಬಾಯಿಮಾತಿಗೆ ಸೀಮಿತವಾಗಿರದೇ ಆಚರಣೆಯಲ್ಲಿ ಇರಬೇಕು ಅಂತ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ…