ಮಂಗಳೂರು: ನಾಪತ್ತೆಯಾದ ಯುವತಿಯ ದ್ವಿಚಕ್ರ ವಾಹನ ಪತ್ತೆ; ಚುರುಕುಗೊಂಡ ತನಿಖೆ

ಮಂಗಳೂರು, ಫೆ.25: ಪಿ.ಎಚ್.ಡಿ‌ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ   ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಉಳ್ಳಾಲ   ಪೊಲೀಸರಿಗೆ ಚೈತ್ರಾಳ ದ್ವಿಚಕ್ರ ವಾಹನ ಸುರತ್ಕಲ್ ಬಳಿ ಪತ್ತೆಯಾಗಿದೆ. ಸದ್ಯ ಆಕೆಯ ದ್ವಿಚಕ್ರ ವಾಹನ ವಶಕ್ಕೆ ಪಡೆದ ಉಳ್ಳಾಲ ಪೊಲೀಸರು ಚೈತ್ರಾಳ ಪತ್ತೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾಳ ಮೊಬೈಲ್ ಪಂಪ್ ವೆಲ್ ಬಳಿ ಸ್ವಿಚ್ಡ್ ಆಫ್ ಆಗಿತ್ತು. ಸುರತ್ಕಲ್ ಬಳಿಯ ಎಟಿಎಂನಲ್ಲೂ ಹಣ ಡ್ರಾ ಮಾಡಿದ್ದಳು. ಪಿಹೆಚ್​ಡಿ ವಿದ್ಯಾರ್ಥಿನಿಯಾಗಿದ್ದರಿಂದ ತಿಂಗಳಿಗೆ 40 ಸಾವಿರ ರೂಪಾಯಿ ಸ್ಟೈಫಂಡ್ ಬರುತ್ತಿತ್ತು. ಅದರಂತೆ ಈಕೆಯ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಇತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

ಸದ್ಯ, ಚೈತ್ರಾ ಕೇರಳ ಅಥವಾ ಬೆಂಗಳೂರು ಕಡೆ ಇರುವ ಅನುಮಾನ ವ್ಯಕ್ತವಾಗಿದೆ. ಇನ್ನೊಂದೆಡೆ, ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವ ಶಾರೂಕ್ ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿರುವ ಕಾರಣ ಲವ್​ಜಿಹಾದ್ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಯುವತಿ ನಾಪತ್ತೆ ಪ್ರಕರಣದ ಹಿಂದೆ ‘ಲವ್​ ಜಿಹಾದ್’

ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿದೆ. ಈ ಬಗ್ಗೆ ಮಾತನಾಡಿದ ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನ ಬ್ಲ್ಯಾಕ್ ಮೇಲ್ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ವಾರದ ಹಿಂದೆಯೇ ಆ ಪಿಜಿಯ ಬಗ್ಗೆ ನಮ್ಮ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ಇಲಾಖೆ ತಕ್ಷಣ ಯುವತಿಯನ್ನ ಪತ್ತೆ ಮಾಡಬೇಕು. ಡ್ರಗ್ ಮತ್ತು ಲವ್ ಜಿಹಾದ್ ತಡೆಯದೇ ಇದ್ದರೆ ನಾವು ಹೋರಾಟ ಮಾಡುತ್ತೇವೆ. ಮುಸಲ್ಮಾನ ಯುವಕನಿಗೆ ಡ್ರಗ್ ಮಾಫಿಯಾ ಜೊತೆ ನಂಟಿದೆ. ಇದರ ಹಿಂದೆ ಇರುವ ಷಡ್ಯಂತ್ರವನ್ನ ಪೊಲೀಸರು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.

ಗಾಂಜಾ ಮಾಫಿಯಾದಲ್ಲಿರುವ ಶಾರೂಕ್ ಜೊತೆ ಚೈತ್ರಾ ಸಂಪರ್ಕ

ಹುಡುಗರು ರಾತ್ರಿ ಹೊತ್ತು ಪಿಜಿ ಬಳಿ‌ ಬರುತ್ತಿರುವ ಬಗ್ಗೆ 10 ದಿನದ ಹಿಂದೆ ಸ್ಥಳಯರಿಂದ ಮಾಹಿತಿ ಬಂದಿತ್ತು. ಚೈತ್ರಾ ಹೆಬ್ಬಾರ್ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವಳು. ಈಕೆಗೆ ಶಾರೂಕ್ ಎಂಬ ಯುವಕನ ಜೊತೆ ನಿಕಟ ಸಂಪರ್ಕ ಇತ್ತು. ಶಾರೂಕ್ ಗಾಂಜಾ ಡ್ರಗ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡವ. ಡ್ರಗ್ಸ್​‌ನ ಆಸೆ ಆಮೀಷ ತೋರಿಸಿ ಬ್ರೈನ್ ವಾಶ್ ಮಾಡಿದ್ದಾನೆ. ಇದು ಲವ್ ಜಿಹಾದ್ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

ಯುವತಿಯನ್ನು ಶೀಘ್ರದಲ್ಲಿ ಪತ್ತೆ ಮಾಡಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ ಅವರು, ಪಿಜಿ ಮಾಲೀಕರಿಗೂ ಮೂರು ತಿಂಗಳ ಹಿಂದೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ಪಿಜಿಯವರು ಅಸಡ್ಡೆ ತೋರಿದ್ದಾರೆ. ಮಾಹಿತಿ ಬಂದ ತಕ್ಷಣ ಮನೆಯವರಿಗೆ ತಿಳಿಸಿದ್ದೇವೆ. ಆ ಬಳಿಕ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದರು.

ಚೈತ್ರಾಳ ವರ್ತನೆಯಲ್ಲಿ ದೊಡ್ಡ ಬದಲಾವಣೆ

ಶಾರೂಕ್ ತಡರಾತ್ರಿ ಈ ಪಿಜಿಗೆ ಬರುತ್ತಿದ್ದ. ಪಿಜಿಯಲ್ಲಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಹೇಳುತ್ತಿದ್ದರು. ಡ್ರಗ್ಸ್ ಮಾಫಿಯಾ ವಿದ್ಯಾರ್ಥಿಗಳನ್ನು‌ ಟಾರ್ಗೆಟ್ ಮಾಡುತ್ತಿದೆ. ಕಳೆದ ಐದು ತಿಂಗಳ ಅಂತರದಲ್ಲಿ ಚೈತ್ರಾ ಹೆಬ್ಬಾರ್ ವರ್ತನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿತ್ತು ಎಂದು ಪಿಜಿಯಲ್ಲಿದ್ದ ಇತರೆ ವಿದ್ಯಾರ್ಥಿನಿಯರು ಹೇಳಿದ್ದಾಗಿ ತಿಳಿಸಿದರು.

ವಾರ ಕಳೆದರೂ ಪತ್ತೆಯಾಗದ ಪುತ್ತೂರಿನ ಚೈತ್ರಾ

ನಾಪತ್ತೆಯಾಗಿ ವಾರ ಕಳೆದರೂ ಪುತ್ತೂರಿನ ಚೈತ್ರಾ ಇದುವರೆಗೆ ಪತ್ತೆಯಾಗಿಲ್ಲ. ಮಂಗಳೂರಿನ ಕೋಟೆಕಾರು ಬಳಿಯ ಪಿಜಿಯಿಂದ ಫೆಬ್ರವರಿ 17 ರಂದು ಚೈತ್ರಾ ನಾಪತ್ತೆಯಾಗಿದ್ದಳು. ಈ ಬಗ್ಗೆ ಚೈತ್ರಾಳ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅನ್ಯಕೋಮಿನ ಡ್ರಗ್ ಪೆಡ್ಲರ್ ಜೊತೆ ಚೈತ್ರಾಗೆ ನಂಟು

ಪುತ್ತೂರು ಮೂಲದ ಶಾರೂಕ್ ಡ್ರಗ್ ಪೆಡ್ಲರ್ ಆಗಿದ್ದು, ಈತನೊಂದಿಗೆ ಚೈತ್ರಾ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಅನೇಕ ಬಾರಿ ಶಾರೂಕ್ ಪಿಜಿ ಬಳು ಬರುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕತಾರ್​ನಲ್ಲಿ ಉದ್ಯೋಗದಲ್ಲಿದ್ದ ಈತ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಪುತ್ತೂರಿಗೆ ವಾಪಸ್ ಆಗಿದ್ದನು. ಹಲವು ಸಮಯದಿಂದ ಪುತ್ತೂರಿನಲ್ಲೇ ಇದ್ದ ಶಾರೂಕ್, ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿದ್ದ ಎನ್ನಲಾಗಿದೆ.

ಸದ್ಯ, ಈ ಯುವಕನ ಜೊತೆಗೆ ಚೈತ್ರಾ ತೆರಳಿರುವ ಅನುಮಾನ ವ್ಯಕ್ತವಾಗಿದೆ. ಒಂದೆಡೆ, ಚೈತ್ರಾ ನಾಪತ್ತೆಯಾಗಿ ವಾರ ಕಳೆದರೂ ಪತ್ತೆಯಾಗಿಲ್ಲ, ಇನ್ನೊಂದೆಡೆ, ದೂರು ಕೊಟ್ಟು ಪೋಷಕರು ಸುಮ್ಮನಾಗಿದ್ದಾರೆ. ಈಕೆಯ ತಂದೆ ಮೃತರಾಗಿದ್ದು, ಮಂಗಳೂರಿನ ದೊಡ್ಡಪ್ಪನ ಆಶ್ರಯದಲ್ಲಿದ್ದಳು.