ಸೈಬರ್​​​ ಕ್ರೈಂ: ಒಂದೇ ತಿಂಗಳಲ್ಲಿ 1 ಕೋಟಿ ರೂ. ಕಳೆದುಕೊಂಡ ಬೆಳಗಾವಿಯ ಮೂವರು

ಬೆಳಗಾವಿ, ಫೆಬ್ರವರಿ 14: ಒಂದೇ ತಿಂಗಳಲ್ಲಿ ನಡೆದ ಮೂರು ಪ್ರತ್ಯೇಕ ಸೈಬರ್​ ಕ್ರೈಂ (Cyber Crime) ಪ್ರಕರಣಗಳಲ್ಲಿ ಬೆಳಗಾವಿಯ (Belagavi) ಮೂವರು ವ್ಯಕ್ತಿಗಳು ಒಟ್ಟು 1.53 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಗೋಕಾಕ್ (Gokak) ಮೂಲದ ಉದ್ಯಮಿ ಬಾಬುರಾವ್‌ ಅವರಿಗೆ ಯಾರೋ ಟ್ರೇಡಿಂಗ್‌ನಲ್ಲಿ ಒಳ್ಳೆಯ ‌ಲಾಭ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಬಾಬುರಾವ್​ ಅವರು ಟ್ರೇಡಿಂಗ್ ‌ಮಾಡುವವರ ಪರಿಚಯ ಮಾಡಿಕೊಳ್ಳಲು ಟೆಲಿಗ್ರಾಂ‌ (Telegram) ಆ್ಯಪ್‌ನಲ್ಲಿ ಸರ್ಚ್ ಮಾಡಲು ಆರಂಭಿಸಿದ್ದಾರೆ. ಆಗ ಟೆಲಿಗ್ರಾಂ‌ಂನಲ್ಲಿ ಬಾಬುರಾವ್‌ ಅವರಿಗೆ ವಂಚಕರು ಪರಿಚಯ ಆಗಿದ್ದಾರೆ. ನಂತರ ಬಾಬುರಾವ್​ ಅವರು ವಂಚಕರ ವಾಟ್ಸಪ್ ಗ್ರೂಪ್‌ಗೆ ಸೇರಿದ್ದಾರೆ.

ವಂಚಕರ ಸಲಹೆಯಂತೆ ಉದ್ಯಮಿ ಬಾಬುರಾವ್​ ಕೆಕೆಆರ್‌ಎಂಎಫ್‌ ವೆಬ್ಸೈಟ್‌ನಲ್ಲಿ ಪ್ರೊಫೈಲ್‌ ಕ್ರಿಯೆಟ್‌ ಮಾಡಿದ್ದಾರೆ. ನಂತರ ಇದರಲ್ಲಿ ಹಣ ಹೂಡಿಕೆ‌ ಮಾಡಿದ್ದಾರೆ. ಹೀಗೆ 27.50 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ವಂಚಕರು ಹಣಪಡೆದು ನಾಟ್​ರೀಚೆಬಲ್​ ಆಗಿದ್ದಾರೆ. ಹಣ ಕಳೆದುಕೊಂಡ ಬಾಬುರಾವ್ ಇದೀಗ ಸಿಇಎನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಚಿಕ್ಕೋಡಿ ‌ತಾಲೂಕಿನ‌ ಕೆರೂರು ಗ್ರಾಮದ ಚಿದಾನಂದ್​ ಅವರು ಕೂಡ 58.34 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಚಿದಾನಂದ್ ಪ್ರತಿಷ್ಠಿತ ‌ಕಂಪನಿಯಲ್ಲಿ ಪ್ರೊಗ್ರಾಂ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಂಚಕರು ವಾಟ್ಸಪ್ ಮೂಲಕ ಅನೌನ್ ನಂಬರ್‌ನಿಂದ ಚಿದಾನಂದ್​ ಅವರಿಗೆ ಸಂಪರ್ಕಿಸಿದ್ದಾರೆ. ವಂಚಕರು ಚಿದಾನಂದ್​ ಅವರಿಗೆ ಅಡೆಪ್ಟೆಡ್ ಸೊಶಿಯಲ್ ಮಿಡಿಯಾ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ನೀಡುತ್ತೇವೆ, ಅದು ಕೂಡ ವರ್ಕ್ ಫ್ರಮ್‌ ಹೋಮ್ ಸೌಲಭ್ಯ ಎಂದು ಹೇಳಿದ್ದಾರೆ.

ಈ ಕೆಲಸ ಪಡೆಯಲು ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಇದಕ್ಕೂ ಮೊದಲು ವಂಚಕರು ಚಿದಾನಂದ್ ಅವರ​ ಕೆವಿಜಿ ಬ್ಯಾಂಕ್ ಅಕೌಂಟಿಗೆ 210ರೂ ಹಣ ಹಾಕಿದ್ದಾರೆ. ನಂತರ‌ ಪ್ರೊಫೈಲ್ ‌ಕ್ರಿಯೆಟ್ ಮಾಡಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ‌ಲಾಭ ಬರುತ್ತೆ ಎಂದು ವಂಚಕರು ಚಿದಾನಂದ್​ ಅವರಿಗೆ ನಂಬಿಸಿದ್ದಾರೆ. ಅದರಂತೆ ಚಿದಾನಂದ್​ ಒಂದು ಸಾವಿರ ಜಮಾ‌ ಮಾಡಿದ್ದಾರೆ. ಬಳಿಕ ವಂಚಕರು ಚಿದಾನಂದ‌ ಅವರಿಗೆ 1400 ರೂ‌. ರಿಟರ್ನ್ ನೀಡಿದ್ದಾರೆ.

ಹೆಚ್ಚಿನ ‌ಲಾಭದ‌ ಆಸೆಗೆ ಚಿದಾನಂದ್​ ‌58.34 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ವಂಚಕರು ಹಣ ಪಡೆದು ಪರಾರಿಯಾಗಿದ್ದಾರೆ. ಚಿದಾನಂದ್​​ ಅವರಂತೆ ಶಿವಾನಂದ್​ ಎಂಬುವರು ಕೂಡ ಹಣ ಕಳೆದುಕೊಂಡಿದ್ದಾರೆ. ಮೂವರು ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಡಾ. ಭೀಮಾಶಂಕರ್ ‌ಗುಳೇದ್ ಮಾತನಾಡಿ, ಸಾಮಾಜಿಕ ‌ಜಾಲತಾಣ ಬಳಸಿ ಮೂವರು ಒಂದೇ ತಿಂಗಳಲ್ಲಿ 1.53 ಕೋಟಿ ಹಣ ಕಳೆದುಕೊಂಡಿದ್ದಾರೆ. ಮೂರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕಳೆದುಕೊಂಡ ಹಣದ ಪೈಕಿ ನಲವತ್ತು ಲಕ್ಷ ಹಣ ಫ್ರೀಜ್ ಮಾಡಿದ್ದೇವೆ. ಉಳಿದ ಹಣ ಮರಳಿ ಪಡೆಯಲು ಸಿಬ್ಬಂದಿ ಪ್ರಯತ್ನ ಮಾಡ್ತಿದ್ದಾರೆ. ಹೆಚ್ಚಿನ ಲಾಭದ ಆಮಿಷ ಒಡ್ಡಿ ಸೈಬರ್ ವಂಚಕರು ಮೂವರಿಗೂ ಪಂಗನಾಮ ಹಾಕಿದ್ದಾರೆ ಎಂದು ತಿಳಿಸಿದರು.

ಒಂದೇ ದಿನದಲ್ಲಿ ಹೆಚ್ಚಿನ ಲಾಭ ಕೊಡಲು ಯಾವ ಕಂಪನಿಗಳಿಂದ ‌ಸಾಧ್ಯವಿಲ್ಲ. ಸಾರ್ವಜನಿಕರು‌ ಈ ಸಂಗತಿಯನ್ನು ‌ಮೊದಲು ಮನವರಿಕೆ ‌ಮಾಡಿಕೊಳ್ಳಬೇಕು. ಸೈಬರ್ ವಂಚಕರ ಮೂಲ, ನೆಲೆ ಕಂಡುಹಿಡಿಯುವುದು ಕಷ್ಟ, ಇಂಥ‌ ಆಸೆ- ಆಮಿಷಗಳಿಗೆ ಜನ ಒಳಗಾಗಬಾರದು. ಒಂದು ವೇಳೆ ಹಣ ಕಳೆದುಕೊಂಡರು ತಕ್ಷಣವೇ ಕಂಟ್ರೋಲ್ ರೂಂ‌ ‌1930 ನಂಬರ್‌ಗೆ ಕರೆ ಮಾಡಿ ಮಾಡಬೇಕು. ಹಣ‌ ಕಳೆದುಕೊಂಡು ಬಹಳ‌ ದಿನಗಳ ಬಳಿಕ ದೂರು‌ ನೀಡಲು ಬಂದರೆ ರಿಕವರಿ ಕಷ್ಟವಾಗುತ್ತೆ. ಆದಷ್ಟು ‌ಬೇಗ ಬಂದು ದೂರು‌ ನೀಡಿದರೆ ವಂಚಕರ ಅಕೌಂಟ್ ಪ್ರೀಜ್‌ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ವಂಚಕರು ಹಣ ವಿಥ್ ಡ್ರಾ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗಲ್ಲ. ಸಾಮಾಜಿಕ ‌ಜಾಲತಾಣಗಳಲ್ಲಿ ಬರುವ ಜಾಹೀರಾತು, ಆಮಿಷಗಳಿಗೆ ಯಾರೂ ಒಳಗಾಗಬಾರದು ಎಂದು ಸಾರ್ವಜನಿಕರಲ್ಲಿ‌‌ ಮನವಿ ಮಾಡಿದರು.