ರಾಜ್ಯಪಾಲರ ಬಾಯಲ್ಲೇ ಸುಳ್ಳು ಹೇಳಿಸಿದ ಕಾಂಗ್ರೆಸ್‌; ಬಿಜೆಪಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ (Thawar chand Gehlot) ಅವರ ಬಾಯಲ್ಲೇ ಸುಳ್ಳಿನ ಸರಮಾಲೆಯನ್ನು ಹೇಳಿಸಿದೆ. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ತನ್ನದೆಂದು ಹೇಳಿಕೊಂಡಿದೆ. ಜಾರಿಯಾಗದ ಯೋಜನೆಗಳನ್ನು ಜಾರಿಯಾಗಿದೆ ಎಂದು ಘೋಷಿಸಿಕೊಂಡಿದೆ- ಎಂದು ಬಿಜೆಪಿ ಆಕ್ರೋಶ (BJP Karnataka) ವ್ಯಕ್ತಪಡಿಸಿದೆ.

ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನದ ಆರಂಭದ ದಿನ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮಾಡಿದ ಭಾಷಣಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಬಿಜೆಪಿ ಯೋಜನೆಗಳು ತನ್ನದೆಂದ ಸಿದ್ದರಾಮಯ್ಯ

ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳನ್ನು ಹೇಳಿಸಿದೆ. ಈ ಹಿಂದೆ ಬಿಜೆಪಿ ತಂದಿದ್ದ ಯೋಜನೆಗಳನ್ನು ತಾನೇ ತಂದದ್ದು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿಸಿದ್ದಾರೆ. ಗ್ಯಾರಂಟಿಗಳಿನ್ನೂ ಪೂರ್ಣವಾಗಿ ಜಾರಿಯಾಗಿಲ್ಲ. ಕಂತುಕಂತಿನಲ್ಲಿ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ, ಬೆಂಗಳೂರಿನ ಮೆಟ್ರೋ ಯೋಜನೆಗಳನ್ನೂ ತಮ್ಮದೆಂದು ಹೇಳಿಕೊಂಡಿದ್ದಾರೆ. ಇವೆಲ್ಲವೂ ಕೇಂದ್ರ ಸಹಕಾರದ ಯೋಜನೆಗಳು. ರಾಜ್ಯಪಾಲರಿಂದಲೇ ಸುಳ್ಳು ಹೇಳಿಸಿ ಅವರಿಗೂ ಅವಮಾನ ಮಾಡಿದ್ದಾರೆ ಎಂದು ಆರ್‌. ಅಶೋಕ್‌ ಹೇಳಿದರು.

ʻʻಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿರುವ ಸರ್ಕಾರದ ಆಡಳಿತದಲ್ಲಿ ಕೋಮುಭಾವನೆ ಎಲ್ಲೆ ಮೀರಿದೆ. ಕನ್ನಡ ಹೋರಾಟಗಾರರನ್ನು ಬಂಧಿಸಿ ಈಗ ಕನ್ನಡ ಪರ ಕಾನೂನು ಜಾರಿ ತರುತ್ತೇವೆ ಎನ್ನುತ್ತಾರೆ ಎಂದು ಸರ್ಕಾರದ ವಿರುದ್ಧ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಯೇ ಆಗಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೂ ಒಂದು ರೂಪಾಯಿಯೂ ಸಿಕ್ಕಿಲ್ಲ. ಅದರೂ ಯೋಜನೆ ಜಾರಿಯಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಬರ ಪರಿಹಾರವಾಗಿ ರೈತರಿಗೆ ಎರಡು ಸಾವಿರ ಹಣ ಕೊಟ್ಟಿಲ್ಲ, ಆದರೆ, ಮೊದಲ ಕಂತು ಕೊಟ್ಟಿದ್ದಾಗಿ ಹೇಳಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಬರ ಪರಿಸ್ಥಿತಿ ಎದುರಿಸಲು 25 ಸಾವಿರ ಪರಿಹಾರ ನೀಡಬೇಕು ಅಂತ ನಾವೇ ಒತ್ತಾಯ ಮಾಡಿದ್ದೇವೆ. ಆದರೆ, ಇವರು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರ್‌. ಅಶೋಕ್‌ ಹೇಳಿದರು.

ರಾಜ್ಯ ಸರ್ಕಾರ ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಕೊಡ್ತಾ ಇದ್ದೇವೆ ಅಂತಾರೆ. ಆದರೆ, ಮಕ್ಕಳಿಗೆ ಮೊಟ್ಟೆ, ಚಿಕ್ಕಿ ಕೊಟ್ಟು ಶೌಚಾಲಯ ಕ್ಲಿನ್ ಮಾಡಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಅಶೋಕ್‌ ಕಿಡಿ ಕಾರಿದರು. ರಾಜ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ‌ ಆಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿ ಆಗಿವೆ. ಇಷ್ಟೆಲ್ಲ ಆದರೂ ಶಾಂತಿ ಸುವ್ಯವಸ್ಥೆ ಕಾಪಾಡ್ತೀನಿ ಅಂತ ಹೇಳುತ್ತಿರುವುದು ನಾಚಿಕೆಗೇಡು ಎಂದು ಆರ್‌. ಅಶೋಕ್‌ ಹೇಳಿದರು.

ಎಸಿ ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿ, ಪರಿಶಿಷ್ಟರಿಗೆ ಮೋಸ ಮಾಡಿದ್ದಾರೆ. ಕಳೆದು ಎಂಟು ತಿಂಗಳಲ್ಲಿ ಒಂದು ರೂಪಾಯಿಯನ್ನು ಅಭಿವೃದ್ಧಿಗೆ ಕೊಟ್ಟಿಲ್ಲ. ಈ ಸರ್ಕಾರದಡಿ ಒಂದೇ ಒಂದೇ ಕಾಮಗಾರಿ ಆಗಿಲ್ಲ ಎಂದು ಹೇಳಿದ ಅಶೋಕ್‌, ರಾಜ್ಯ ಸರ್ಕಾರ ಶೇ. 40ರಷ್ಟು ಕಮಿಷನ್‌ ದಂಧೆ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರೇ ಹೇಳಿದ್ದಾರೆ ಎಂದರು.

ಪ್ರತಿಕ್ರಿಯೆ ನೀಡಲೂ ಅರ್ಹವಲ್ಲದ ಭಾಷಣ: ಬಿ.ವೈ ವಿಜಯೇಂದ್ರ

ʻಇಂದಿನ ರಾಜ್ಯಪಾಲರ ಭಾಷಣ ಪ್ರತಿಕ್ರಿಯೆ ನೀಡಲೂ ಅರ್ಹವಲ್ಲದ ಭಾಷಣ. ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಮಾಡಿಸಿದ ಭಾಷಣ ಇದಾಗಿದೆ. ನಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರ ಸಾಧನೆ ಎಂದು ಬಿಂಬಿಸಿಕೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡಿದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.

ಈ ಸರ್ಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದು 50% ಸರ್ಕಾರ. ಅವರದ್ದೇ ಪಕ್ಷದ ಮಾಜಿ ಸಚಿವ ಬಿ ಶಿವರಾಮ್ ಇದನ್ನು ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡ ಇದನ್ನೇ ಹೇಳಿದ್ದಾರೆʼʼ ಎಂದ ಅವರು, ಎಲ್ಲ ರಂಗದಲ್ಲೂ ವಿಫಲವಾಗಿರುವ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ ಎಂದರು.

ಧರ್ಮರಾಯನ ಬಾಯಲ್ಲಿ ಸುಳ್ಳು ಹೇಳಿಸಿದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ

ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯಿಸಿ, ಧರ್ಮರಾಯನ ಬಾಯಲ್ಲಿ ಸುಳ್ಳು ಹೇಳಿಸಿದಂತೆ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಕೇಂದ್ರ ಸಹಕಾರದ ಯೋಜನೆಗಳನ್ನ ಮುಚ್ಚಿಟ್ಟು ಎಲ್ಲವೂ ತನ್ನದೇ ಎಂದು ಹೇಳಿಕೊಂಡಿದೆ ಎಂದರು.

ʻʻಎಂಟು ತಿಂಗಳಿಂದ ಅಭಿವೃದ್ಧಿ. ಆಗಿಲ್ಲ. ಆದರೆ ತಮ್ಮ ಸರ್ಕಾರದ ಈ ಅವಧಿಯನ್ನು ಅಭಿವೃದ್ಧಿ ಶಕೆ ಎಂದು ಹೇಳಿಸಿದ್ದಾರೆ. ಅವರು ಎಂಟು ಮೀಟರ್ ರಸ್ತೆ ಮಾಡಿಸಿರೋದನ್ನು ತೋರಿಸಲಿ ಸಾಕುʼʼ ಎಂದರು.

ದಿಕ್ಕು ದೆಸೆ ಇಲ್ಲದ, ಸುಳ್ಳಿನ ಕಂತೆ: ಬಸವರಾಜ ಬೊಮ್ಮಾಯಿ

ʻʻರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ. ದಿಕ್ಕು ದೆಸೆ ಇಲ್ಲದ, ಅಭಿವೃದ್ಧಿ ಶೂನ್ಯ ಭಾಷಣ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಭಾಷಣ ನೋಡಿಲ್ಲ. ರಾಜ್ಯದ ಪ್ರಗತಿ ಬಗ್ಗೆ ಸರ್ಕಾರ ಮಾಹಿತಿ ಕೊಡಲಿ. ಆದರೆ, ಬರಗಾಲದ ವಿಚಾರದಲ್ಲಿ ಹಸಿಸುಳ್ಳು ಹೇಳಿಸಿದೆ. ತಮ್ಮ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎಲ್ಲರಿಗೂ ಸಂವಿಧಾನವೇ ರಾಷ್ಟ್ರೀಯ ಧರ್ಮ. ಎಲ್ಲ ಧರ್ಮಗಳಿಗೆ ಸಮಾನತೆ ನೀಡಬೇಕು. ಕಾಂಗ್ರೆಸ್ ಒಂದೇ ಧರ್ಮದ ಪರ ತುಷ್ಟಿಕರಣ ಮಾಡಿದ್ದಾರೆʼʼ ಎಂದು ಹೇಳಿದರು ಬೊಮ್ಮಾಯಿ.