ಅಂಕೋಲಾ: ಗ್ರಾಮೀಣ ಸೊಗಡಿನ ಬರವಣಿಗೆಯನ್ನು ಒಳಗೊಂಡು ಅತ್ಯಾಕರ್ಷಕ ಶಬ್ದಗಳ ಮೂಲಕ ಕೃತಿಯನ್ನು ನಿರೂಪಿಸುವ ಶೈಲಿಯಿಂದ ನಾಡಿನಲ್ಲೆಡೆ ಗಮನಸೆಳೆದ ಬರಹಗಾರರಾಗಿ, ಸಾಹಿತಿ ರಂಗಕರ್ಮಿ ಉಪನ್ಯಾಸಕ ಮತ್ತು ಪತ್ರಕರ್ತರಾಗಿ ಗುರುತಿಸಿಕೊಂಡು ನಾಡಿನದ್ಯಂತ ಪ್ರಖ್ಯಾತರಾಗಿದ್ದ ವಿಷ್ಣು ನಾಯ್ಕ(79) ನಿಧನರಾಗಿದ್ದಾರೆ.
1944ರಲ್ಲಿ ತಾಲ್ಲೂಕಿನ ಅಂಬಾರಕೊಡ್ಲಾದಲ್ಲಿ ಅನಕ್ಷರಸ್ತ ಕುಟುಂಬದಲ್ಲಿ ವಿಷ್ಣು ನಾಯ್ಕರು ಜನಿಸಿದ್ದರು. ಜಾನಪದ ಮುಖ್ಯ ವಿಷಯವನ್ನಾಗಿ ಸ್ನಾತಕೋತ್ತರ ಪದವಿ ಪಡೆದಿದ್ದರು. 50 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 25 ಸಂಪಾದಿತ ಕೃತಿಗಳನ್ನು ಒಳಗೊಂಡು 66 ಕೃತಿಗಳನ್ನು ರಚಿಸಿದ್ದಾರೆ. ಕವನ ನಾಟಕ ಅಂಕಣ ವಿಮರ್ಶೆ ಕಥಾಸಂಕಲನ ಮತ್ತು ಜೀವನ ಪರಿಚಯಗಳ ಕೃತಿಗಳನ್ನು ಇದು ಒಳಗೊಂಡಿದೆ. ಸಕಾಲಿಕ ಸಾಪ್ತಾಹಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.
2007ರಲ್ಲಿ ಭಟ್ಕಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಮನೆಯ ಮೇಲ್ಮಡಿಯಲ್ಲಿ ಒಂದೆಡೆ ರಾಘವೇಂದ್ರ ಪ್ರಕಾಶನವಿದ್ದರೆ ಇನ್ನೊಂದೆಡೆ ವಸ್ತು ಸಂಗ್ರಹಾಲಯವಿತ್ತು. ವಸ್ತು ಸಂಗ್ರಹಾಲಯದ ಒಂದು ಕೊಠಡಿಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ, ಉಭಯ ಕುಶಲೊಪರಿ ವಿನಿಮಯ, ಹೆಸರಾಂತ ಸಾಹಿತಿಗಳ ಕೈಬರಹ, ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿಗಳು ತುಂಬಿದ್ದವು. ಇನ್ನೊಂದು ಕೊಠಡಿಯಲ್ಲಿ ತಾಯಿಯ ನೆನಪಿನಲ್ಲಿ ಅವ್ವನ ನೆನಪಿನ ದೇಶಿ ವಸ್ತುಗಳನ್ನು ಇಡಲಾಗಿತ್ತು. ಸಾಂಪ್ರದಾಯಿಕವಾಗಿ ಅಂಕೋಲಾ ತಾಲೂಕಿನಲ್ಲಿ ದಿನಬಳಕೆಯ ಮತ್ತು ಹಬ್ಬ ಹರಿದಿನಗಳಲ್ಲಿ ಬಳಸುವ ವಸ್ತುಗಳು ಇಲ್ಲಿದ್ದವು.
1973 ರಲ್ಲಿ ಅಂಬಾರಕೊಡ್ಲಾದ ಪರಿಮಳದಲ್ಲಿನ ರಾಘವೇಂದ್ರ ಪ್ರಕಾಶನ ಸ್ಥಾಪಿಸಿದ್ದರು. 183 ಗ್ರಂಥಗಳನ್ನು ರಾಘವೇಂದ್ರ ಪ್ರಕಾಶನದ ಮೂಲಕ ಪ್ರಕಟಿಸಲಾಗಿದೆ. ಖ್ಯಾತ ವಿಮರ್ಶಕ ಜಿ ಎಚ್ ನಾಯಕರ ಆತ್ಮಕಥೆ ‘ಬಾಳು’ ಇಲ್ಲಿಯೇ ಪ್ರಕಟಗೊಂಡಿತ್ತು.
ವಿಷ್ಣು ನಾಯ್ಕರ ಕವಿ-ಕರ್ಮಯೋಗಿ ದಿನಕರ ದೇಸಾಯಿ ಉಪನ್ಯಾಸ ಗ್ರಂಥ ಮಾಲೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿತ್ತು. ಅವರ ನೂರೆಂಟು ಕಿಟಕಿಗಳು, ದೇವರ ಮರ, ಬೆಳಕಿನ ಕರೆ, ವರ್ತಮಾನದ ಕಣ್ಣು, ನೋವು ಪ್ರೀತಿಯ ಪ್ರಶ್ನೆ, ಅರೆ ಖಾಸಗಿ, ಸಂಜೆ ಸೂರ್ಯ, ಕಾಲೋಚಿತ, ಪ್ರವೇಶ ಕೃತಿಗಳು ಸಾಹಿತ್ಯ ಪ್ರೇಮಿಗಳ ಮೆಚ್ಚುಗೆ ಪಡೆದಿದ್ದವು.
ಜೆ. ಪ್ರೇಮಾನಂದವರು ರಚಿಸಿದ , ವಿಷ್ಣು ನಾಯ್ಕ ಎಂಬ ವಿಸ್ಮಯ ಕೃತಿ ಅವರ ಬದುಕಿನ ಕುರಿತು ವಿವರಣೆಯನ್ನ ನೀಡುತ್ತದೆ.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಅತ್ಯುತ್ತಮ ಗ್ರಂಥ ಪ್ರಕಾಶಕ, ಬೇಂದ್ರೆ ಕಾವ್ಯ ಪುರಸ್ಕಾರ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಒಳಗೊಂಡು ವಿವಿಧ ಸಂಘ ಸಂಸ್ಥೆಗಳ ಸದಸ್ಯರಾಗಿ, ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪರಿಮಳದಂಗಳ ಮತ್ತು ಗ್ರಂಥ ಸಂಗಾತಿ ಎನ್ನುವ ಎರಡು ಕೃತಿಗಳನ್ನು ವಿಷ್ಣು ನಾಯ್ಕರ ಕುರಿತಾಗಿ ರಚಿಸಲಾಗಿದೆ.
ವಿಷ್ಣು ನಾಯ್ಕರ ನಿಧನಕ್ಕೆ ಹಿರಿಯ ಸಾಹಿತಿಗಳು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.