ಬಸವಣ್ಣ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಸಾಂಸ್ಕೃತಿಕ ನಾಯಕ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ:- ಬಸವಣ್ಣ ಅವರು ಸಮಾಜ ಸುಧಾರಣಾ ಕಾರ್ಯಗಳು ಮತ್ತು ತಮ್ಮ ವಚನಗಳ ಮೂಲಕ ಮೂಡನಂಬಿಕೆ, ಅಜ್ಞಾನದಿಂದ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಸಾಂಸ್ಕೃತಿಕ ನಾಯಕ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

 ಅವರು ಇಂದು , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಶ್ರೀ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರದ ಅನಾವರಣ ಸಮಾರಂಭದಲ್ಲಿ ಶ್ರೀ.ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

 ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಮೂಲ ಕಲ್ಪನೆಯನ್ನು ಬಿತ್ತಿದ ಅವರು ಸಂವಿಧಾನದ ಸರ್ವರಿಗೂ ಸಮಬಾಳು, ಸರ್ವರಿಗೆ ಸಮಪಾಲು ಆಶಯದಂತೆ ಎಲ್ಲ ವರ್ಗದ ಜನರಿಗೆ ಎಲ್ಲಾ ಕಾರ್ಯದಲ್ಲಿ ಸಮಾನ ಅವಕಾಶಗಳನ್ನು ನೀಡುವ ಮೂಲಕ ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂದು ಸಾರಿದ್ದರು.

            ಅಂದಿನ ಕಾಲದಲ್ಲಿದ್ದ ಜಾತಿ ಮತ್ತು ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮದ ಮೂಲಕ ಸಮಾನತೆಯ ತತ್ವ ಭೋದಿಸಿದ್ದರು. ಅವಿದ್ಯಾವಂತರಿಗೂ ಸರಳವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ,ಅವುಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಅವರು ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಎಲ್ಲರೂ ತಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು.

ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳು,ಸ್ಥಳೀಯಾಡಳಿತ ಕಚೇರಿಗಳು, ಗ್ರಾಮ ಪಂಚಾಯತ್‌ಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಮಾತನಾಡಿ, ಉತ್ತರ ಭಾರತ ಮೂಲದ ನನಗೆ ಪಿಯುಸಿ ಯಲ್ಲಿ ಬಸವಣ್ಣ ನವರ ಬಗ್ಗೆ ಸ್ವಲ್ಪ ತಿಳಿದಿತ್ತು ಆದರೆ ನಾನು ಐ.ಎ.ಎಸ್ ಗೆ ಅಧ್ಯಯನ ಮಾಡುವಾಗ ಬಸವಣ್ನ ನವರ ಬಗ್ಗೆ ಸವಿವರವಾಗಿ ತಿಳಿಯಲು ಸಾಧ್ಯವಾಯಿತು. ಸುಮಾರು 900 ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಬಸವಣ್ನ ನವರು ತಮ್ಮ ವಚನಗಳಲ್ಲಿ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ, ಜಾತೀಯ ವ್ಯವಸ್ಥೆ, ಅಹಿಂಸೆ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಸಂಬAದಿಸಿದAತೆ ಅವರ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

            ಬಸವಣ್ಣ ನವರು ವಚನ ಚಳುವಳಿಯ ಹರಿಕಾರರು, ಧಾರ್ಮಿಕ ಕ್ರಾಂತಿಯ ನೇತಾರರು, ಸಮಾಜ ಸುಧಾರಕರು, ಮಾನವೀಯ ಮೌಲ್ಯಗಳ ಬಗ್ಗೆ ತಮ್ಮ ವಚನಗಳಲ್ಲಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ಹೇಳಿದರು.

            ಬಸವಣ್ಣ ನವರ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಿ.ಎಸ್.ದೊಡ್ಡಮನಿ ಮಾತನಾಡಿ, ಬಸವಣ್ಣ ಯುವ ಪರಿವರ್ತಕರು, ಅಂಧಶ್ರದ್ದೆ , ಸಮಾಜದಲ್ಲಿನ ಡಾಂಭಿಕತೆ, ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ಜಾತೀಯತೆಯಲ್ಲಿನ ಮೇಳು ಕೀಳುಗಳನ್ನು ತೊಡೆದುಹಾಕು, ಸಮಾನತೆ ತರಲು ಪ್ರಯತ್ನಿಸಿದ್ದರು. ಮಾನವತ್ವ ಸಾರುವ ಅವರ ವಚನಗಳು ಮಾನವ ಕಲ್ಯಾಣಕ್ಕಾಗಿ ಅತೀ ಅಗತ್ಯವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣ ಕುರಿತು ಬಸವಣ್ಣ ನವರು ಆರಂಭಿಸಿದ ಪ್ರಯತ್ನವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಾಖಲಿಸಿದರು ಎಂದರು.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಸ್ವಾಗತಿಸಿ ವಂದಿಸಿದರು.

 ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.