ಕಾರವಾರ, : ಮಕ್ಕಳ ದಾಹ ನೀಗಿಸಲು ಏಕಾಂಗಿಯಾಗಿ ಬಾವಿ ತೋಡುತಿದ್ದ ಗೌರಿ ನಾಯ್ಕ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಗೌರಿ ಅವರು ಈ ಕೂಡಲೆ ಬಾವಿ ತೋಡುವುದನ್ನು ನಿಲ್ಲಿಸಬೇಕು. ಮತ್ತು ಭದ್ರತೆ ದೃಷ್ಟಿಯಿಂದ ತೋಡಿದ ಬಾವಿಯನ್ನು ಮುಚ್ಚುಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿರಸಿ ವಿಭಾಗದ ಸಿಡಿಪಿಓ ವೀಣಾ ಶಿರ್ಸಿಕರ್ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸೂಚನೆ ನೀಡಿದ ಹಿನ್ನಲೆಯಲ್ಲಿ ಗೌರಿ ನಾಯ್ಕ್ ಬಾವಿ ತೋಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಮಕ್ಕಳ ದಾಹ ತೀರಿಸಲು ಬಾವಿ ತೋಡುತ್ತಿರುವ ಮಹಿಳೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಗಣೇಶ ನಗರದ ಭಾಗದಲ್ಲಿ ಬೇಸಿಗೆ ಬಂತೆಂದರೇ ನೀರಿನ ಕೊರತೆಯಿಂದ ಸಮಸ್ಯೆ ಎದುರಾಗುತ್ತದೆ. ವಾರದಲ್ಲಿ ಎರಡು ದಿನ ಗ್ರಾಮಪಂಚಾಯಿತಿಯಿಂದ ಬರುವ ನೀರು ಅಷ್ಟಕಷ್ಟೇ. ಇನ್ನು ನೀರು ಶುದ್ಧವಾಗಿರದ ಕಾರಣ ಅಂಗನವಾಡಿಯಲ್ಲಿ ಅಡುಗೆ ಮಾಡಲು ಹಾಗೂ ಮಕ್ಕಳಿಗೆ ಕುಡಿಯಲು ಹೊರಭಾಗದಿಂದ ಹೊತ್ತು ತರಬೇಕು. ಹೀಗಾಗಿ ಈ ಸಮಸ್ಯೆ ಅರಿತ ಗೌರಿ ನಾಯ್ಕ ಇದೀಗ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದ್ದಾರೆ.
ಜನವರಿ 30 ನೇ ತಾರೀಕಿನಿಂದ ಗೌರಿನಾಯ್ಕ ಅವರು ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡುತಿದ್ದಾರೆ. ಇವರ ಏಕಾಂಗಿ ಪ್ರಯತ್ನದಿಂದ ಇದೀಗ 20 ಅಡಿಗೂ ಹೆಚ್ಚು ಆಳ ಬಾವಿ ತೋಡಲಾಗಿದೆ. ಮಕ್ಕಳಿಗೆ, ಸ್ಥಳೀಯರಿಗೆ ಕುಡಿಯಲು ಶುದ್ಧ ನೀರು ಸಿಗಬೇಕು ಎಂಬ ಬಯಕೆ ಇವರದ್ದಾದರೆ, ನೀರನ್ನು ಹಿತಮಿತವಾಗಿ ಬಳಸಿ ಎನ್ನುವ ಸಂದೇಶ ಸಹ ಇದರಲ್ಲಿ ಕೂಡಿದ್ದು ಎಲ್ಲಿಯವರೆಗೆ ಬಾವಿಯಲ್ಲಿ ಗಂಗೆ ಬರುವುದಿಲ್ಲವೂ ಅಲ್ಲಿಯವರೆಗೂ ಬಾವಿ ತೋಡುವ ಕೆಲಸ ಮಾಡಿ ಗಂಗೆ ತರಿಸುವ ಛಲದಲ್ಲಿದ್ದಾರೆ ಈ ಗೌರಿ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮತ್ತು ಮಕ್ಕಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಬಾವಿ ಮುಚ್ಚುವ ಸೂಚನೆ ನೀಡಿದ್ದಾರೆ.