ಹೊನ್ನಾವರ:ತಾಲೂಕಿನ ಅರೇ ಅಂಗಡಿಯ ಸಿರಿ ಬಿ ಎಸ್ ಡಬ್ಲ್ಯೂ ಪದವಿ ಕಾಲೇಜ್ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಸಹಯೋಗದೊಂದಿಗೆ ಕಾಲೇಜಿನಲ್ಲಿ ರವಿವಾರ ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಿತು.
ಗಿಡಕ್ಕೆನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿರಿ ಬಿ ಎಸ್ ಡಬ್ಲ್ಯೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಅರುಣ್ ನಾಯ್ಕ ಮಾತನಾಡಿ,ಜಿಲ್ಲೆಯ ಏಕೈಕ ಸಮಾಜ ಕಾರ್ಯ ಶಿಕ್ಷಣ ಹೊಂದಿರುವ ಕಾಲೇಜು ನಮ್ಮದಾಗಿದೆ.ಇಲ್ಲಿ ರ್ಯಾಂಕ್ ಪಡೆದ ಅನೇಕ ವಿದ್ಯಾರ್ಥಿಗಳಿದ್ದಾರೆ. ಈ ಹಿಂದೆ ಅನೇಕ ವಿವಿಧ ರೀತಿಯ ಕ್ಯಾಂಪ್ ಮಾಡಿದ್ದೇವೆ. ಉದ್ಯೋಗ ಮೇಳ ಇದೇ ಮೊದಲ ಬಾರಿಯಾಗಿದೆ.ಅನೇಕ ಸ್ಥಳೀಯ ವಿದ್ಯಾವಂತರು ಉದ್ಯೋಗವಿಲ್ಲದಿದ್ದಾರೆ. ಹಾಗಾಗಿ ಗ್ರಾಮೀಣ ಮಟ್ಟದಲ್ಲಿ ಈ ಉದ್ಯೋಗ ಮೇಳ ಆಯೋಜಿಸಿದ್ದೇವೆ. ತಿಂಗಳಿಗೊಮ್ಮೆ ಒನ್ಲೈನ್ ಮೂಲಕ ಕಿರು ಉದ್ಯೋಗ ಮೇಳ ಕೂಡ ನಡೆಯಲಿದೆ.ಇಂದು ಆಯ್ಕೆಯಾಗದವರು ನಮ್ಮ ಸಂಪರ್ಕದಲ್ಲಿರಿ.ಉದ್ಯೋಗ ಬಯಸುವವರಿಗೆ ಅವರ ಅರ್ಹತೆ ಮೇರೆಗೆ ಅವಕಾಶ ಒದಗಿಸುವುದು ನಮ್ಮ ಹಾಗೂ ಭಾಗವಹಿಸುವ ಕಂಪನಿಗಳ ಉದ್ದೇಶವಾಗಿದೆ. ಇಲ್ಲಿ ಪ್ರತಿಭೆ ಇದ್ದವರಿಗೆ ಖಂಡಿತ ಅವಕಾಶ ಇದೆ ಎಂದು ಉದ್ಯಮದಲ್ಲಿ ಯಶಸ್ವಿ ಕಂಡವರ ಸಾಧನೆ ಕುರಿತು ಹೇಳಿ ಹುರಿದುಂಬಿಸಿದರು.ಸಮಾಜಕಾರ್ಯ ಪದವಿ ಕಾಲೇಜು ಸಮಾಜಕಾರ್ಯದ ಹಾದಿಯಲ್ಲಿಯೇ ಸಾಗುತ್ತಿದೆ ಎಂಬುದಕ್ಕೆ ಈ ಉದ್ಯೋಗ ಮೇಳ ಸಾಕ್ಷಿಯಾಗುತ್ತಿದೆ ಎಂದರು.
ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ನಿರ್ದೇಶಕ ಪಾಂಡುರಂಗರಾವ್ ಮಾತನಾಡಿ,ನಮ್ಮಲ್ಲಿರುವ ನಿರುದ್ಯೋಗ ಸಮಸ್ಯೆ ಹೊಡೆದೊಡಿಸಿ ಆಮೂಲಕ ಉದ್ಯೋಗ ನೀಡುವುದು ನಮ್ಮ ಉದ್ದೇಶವಾಗಿದೆ.ಸರ್ಕಾರಿ ವಲಯದ ಉದ್ಯೋಗದಲ್ಲಿ ಸಿಗುವಂತಹ ಸೇವಾ ಭದ್ರತೆಗಳು ಖಾಸಗಿ ವಲಯದ ಉದ್ಯೋಗದಲ್ಲಿಯು ಸಿಗುತ್ತಿದೆ.ನಿಮಗೆ ಯಾವುದು ಸೂಕ್ತ ಅನಿಸುತ್ತದೆಯೋ ಆ ಉದ್ಯೋಗ ಪಡೆಯಿರಿ ಎಂದರು.
ಇನ್ನೊರ್ವ ಸನ್ ಇಂಡಿಯಾ ಕಂಪನಿ ಎಚ್ ಆರ್ ವಿರೂಪಾಕ್ಷಪ್ಪ ಮಾತನಾಡಿ,ಗ್ರಾಮೀಣ ಮಟ್ಟದಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಇಂದು ಉದ್ಯೋಗ ಮೇಳ ನಡೆದಿದೆ.ಇಂದು ಪುರುಷ ಅಥವಾ ಮಹಿಳೆ ಉದ್ಯೋಗ ಹೊಂದಿದರೆ ಮಾತ್ರ ಜೀವನ ಎದುರಿಸಲು ಸಾಧ್ಯವಾಗುತ್ತದೆ. ಇಂದು ಜೀವನ ಎನ್ನುವುದು ಕ್ಲಿಷ್ಟಕರವಾಗಿದ್ದು, ಖರ್ಚಿನಿಂದ ಕೂಡಿದೆ.ಹಾಗಾಗಿ ಉದ್ಯೋಗ ಹೊಂದಬೇಕಾದ ಅನಿವಾರ್ಯವಿದೆ.ಕರಾವಳಿ ಭಾಗದ ಜನ ಬೆಂಗಳೂರಿನಂತಹ ನಗರಕ್ಕೆ ಬರಲು ಹಿಂಜರಿಯುತ್ತಿದ್ದಾರೆ.ಅವಕಾಶ ಸಿಕ್ಕಾಗ ಸದ್ಭಳಕೆ ಮಾಡಿಕೊಂಡಾಗ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.
ವೇದಿಕೆಯಲ್ಲಿ ಒಪ್ಟಿಮಮ್ ಸರ್ವೀಸ್ ನ ಎಚ್ ಆರ್ ಶಿವಕುಮಾರ್,ಟಯೋಟಾ ಕಂಪನಿಯ ಎಚ್ ಆರ್ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಬ್ಯಾಂಕ್ ಹಾಗೂ ಎಂಎನ್ ಸಿ ಕಂಪನಿಗಳಿಗೆ ನೇರ ನೇಮಕ ಹೊಂದುವ ಅವಕಾಶ ನೀಡಲಾಗಿತ್ತು. ಜಿಲ್ಲೆ,ಹೊರಜಿಲ್ಲೆಗಳಿಂದ 500ಕ್ಕು ಅಧಿಕ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು.ಪಿಯುಸಿ, ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿ ಎಸ್ ಡಬ್ಲ್ಯೂ, ಎಂ ಎಸ್ ಡಬ್ಲ್ಯೂ, ಎಂಎ, ಎಂಕಾಂ, ಎಂಬಿಎ, ಐಟಿಐ, ಡಿಪ್ಲೋಮೋ, ಬಿಇ, ಇನ್ನಿತರ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.