ಕಾರವಾರ, ಫೆ.05: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು ದಿನದಲ್ಲಿ ಮೂರು ಮಂಗಗಳು ಮೃತಪಟ್ಟಿವೆ. ಸೂಕ್ತ ಲಸಿಕೆ ಇಲ್ಲದಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಮುಂಜಾಗ್ರತೆ ಮೂಡಿಸುತ್ತಿದ್ದಾರೆ. ಆದರೆ ಮಂಗನ ಕಾಯಿಲೆಯಿಂದ ಭಯಭೀತರಾಗಿರುವ ಜನರು ನಿಮ್ಮ ಮುಂಜಾಗ್ರತೆ ಬೇಡ, ಲಸಿಕೆ ಕೊಡಿ ಎನ್ನುತ್ತಿದ್ದಾರೆ. 14 ದಿನಗಳಲ್ಲಿ 37 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. 16 ಜನ ತಾಲೂಕು ಆಸ್ಪತ್ರೆ ಹಾಗೂ 6 ಜನ ಮಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟ 22 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗ ಉಲ್ಭಣಗೊಳ್ಳುತ್ತಿರುವ ಬೆನ್ನಲ್ಲೆ ಮಂಗನ ಸಾವಿನ ಆತಂಕದಲ್ಲಿ ಸಿದ್ಧಾಪೂರದ ಜನರಿದ್ದಾರೆ. ಸಿದ್ದಾಪೂರದಲ್ಲಿ ಮಂಗನ ಕಾಯಿಲೆ ಆರಂಭ ಆದ ಬಳಿಕ ಇದುವರೆಗೆ ಮೂರು ಮಂಗಗಳು ಸಾವನ್ನಪ್ಪಿದ್ದಾರೆ. ಆದರೆ ಆ ಬಗ್ಗೆ ಹೇಳಿಕೆ ನೀಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಮಂಗ ಸಾವನಪ್ಪಿದೆ ಆದರೆ ಯಾವುದರಿಂದ ಸತ್ತಿದೆ ಎಂಬ ಖಚಿತ ಮಾಹಿತಿ ಇಲ್ಲ ಎಂದಿದ್ದಾರೆ. ರೋಗ ಉಲ್ಭಣ ಜೊತೆಗೆ ಮಂಗನ ಸಾವು ಹೆಚ್ಚಿನ ಆತಂಕ ಸೃಷ್ಟಿಸಿದೆ.
ರಾಜ್ಯಕ್ಕೆ ಮಂಗನ ಕಾಯಿಲೆ ಭೀತಿ
ರಾಜ್ಯದಲ್ಲಿ ಮಂಗನ ಖಾಯಿಲೆ ಆತಂಕ ಶುರುವಾಗಿದೆ. ನವೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರ ಸ್ನಾಯುಗಳ ನೋವು, ತಲೆ ನೋವು ಇತ್ಯಾದಿ ರೋಗ ಲಕ್ಷಣಗಳು. ರಾಜ್ಯದಲ್ಲಿ ಈಗಾಗಲೆ ಒಟ್ಟು 49 ಮಂಗನ ಖಾಯಿಲೆ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆ ಜನವರಿ 1ರಿಂದ ಫೆಬ್ರವರಿ 2ರವರೆಗೆ ರಾಜ್ಯದಲ್ಲಿ 258 ಕೆ.ಎಫ್.ಡಿ. (ಎಂಡಮಿಕ್)ಪರೀಕ್ಷೆ ನಡೆಸಿದೆ. ಈ ವೇಳೆ ಮೂರು ಜಿಲ್ಲೆಗಳಿಂದ ಒಟ್ಟು 49 ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ (12), ಉತ್ತರ ಕನ್ನಡ (34) ಹಾಗೂ ಚಿಕ್ಕಮಗಳೂರು (3) ಪ್ರಕರಣ ಪತ್ತೆಯಾಗಿದೆ.
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದರಂತೆ 2 ಸಾವು ಪ್ರಕರಣಗಳು ವರದಿಯಾಗಿವೆ. ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದ್ದಾರೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಪ್ರಾಥಮಿಕ ಚಿಕಿತ್ಸೆ ಪಡೆದು KFD ಪರೀಕ್ಷೆಗೆ ರಕ್ತ ಮಾದರಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕಾಡಿಗೆ ಹೋಗುವ ಮುನ್ನ ಇಲಾಖೆ ಉಚಿತವಾಗಿ ನೀಡುವ DEPA ತೈಲವನ್ನು ಲೇಪಿಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಡಿಹೆಚ್ಓ ಗಳು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದ್ದಾರೆ.
ಇನ್ನು ಮಂಗನ ಕಾಯಿಲೆ ಸಂಬಂಧ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಮಾತನಾಡಿದ್ದು, ಕೆಎಫ್ ಡಿ ಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ನೀಡಲಾಗಿದೆ. ಮಂಗನ ಖಾಯಿಲೆ ನಿಯಂತ್ರಣಕ್ಕೆ ಎಲ್ಲಾ ಕ್ರಮವಹಿಸಲಾಗಿದೆ. ನಾನು ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಈ ವರ್ಷ ನಮ್ಮ ಬಳಿ ವ್ಯಾಕ್ಸಿನ್ ಇಲ್ಲ. ಹೀಗಾಗಿ ಈ ವರ್ಷ ವ್ಯಾಕ್ಸಿನ್ ಇಲ್ಲದೆ ನಿಭಾಯಿಸಬೇಕು. ಎಲ್ಲಾ ಮುಜಾಗ್ರತಾ ಕ್ರಮ ವಹಿಸಲಾಗಿದೆ. KFDಗೆ ಉಚಿತವಾಗಿ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ KFD 10 ರಿಂದ 12 ಜಿಲ್ಲೆಗಳಲ್ಲಿ ಇದು ಕಂಡು ಬಂದಿದೆ. ಪ್ರಮುಖ ಮೂರು ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮವಹಿಸಲಾಗಿದೆ. ಮಂಗನ ಖಾಯಿಲೆ ಬಗ್ಗೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ. ಕಾಡಿಗೆ ಹೋಗುವ ಮುನ್ನ ಇಲಾಖೆ ಉಚಿತವಾಗಿ ನೀಡುವ DEPA ತೈಲವನ್ನು ಲೇಪಿಸಿಕೊಂಡು ಹೋಗುವಂತೆ ಸೂಚನೆ ನೀಡಿದ್ದೇವೆ. DEPA ತೈಲವನ್ನು ಉಚಿತವಾಗಿ ಎಲ್ಲ ಕುಟುಂಬಗಳಿಗೆ ನೀಡಲಾಗಿದೆ ಎಂದರು.