ಅಂಕೋಲಾ: ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ಕ್ರಾಂತಿಯನ್ನು ಬೆಳಗಿಸಿದ ಶಿಸ್ತಿನ ಸಿಪಾಯಿ ಪುರಸಭೆ ಸದಸ್ಯ ಜಗದೀಶ ನಾಯಕ ಇಂದು ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಟ್ಟಣದಲ್ಲಿ ಪೂರ್ಣಪ್ರಜ್ಞ ಪ್ರೌಢಶಾಲೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸಲು ಜಗದೀಶ ನಾಯಕ ಅವರು ಅವಿರತವಾಗಿ ಐದು ದಶಕಗಳಿಂದ ಶ್ರಮಿಸುತ್ತಿದ್ದರು. 2005ರಿಂದ ತಾಲ್ಲೂಕಿನಲ್ಲಿ ವಿಭಿನ್ನ ರೀತಿಯ ಶಿಕ್ಷಣ ಒದಗಿಸುವ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವಿ ಪೂರ್ವ ಕಾಲೇಜನ್ನು ಆರಂಭಿಸಿದ್ದರು. ಒತ್ತಡ ಪ್ರಭಾವಗಳಿಗೆ ಎಂದು ಮಣೆ ಹಾಕದೇ ಶಿಕ್ಷಣ ಸಂಸ್ಥೆಯನ್ನು ನಿರ್ಭಿಡತೆಯಿಂದ ಕಟ್ಟಿ ಬೆಳೆಸುವ ಮೂಲಕ ಅನುಕರಣಿಯ ವ್ಯಕ್ತಿತ್ವದಿಂದ ತಾಲೂಕಿನ ಅತ್ಯಂತ ಜಗದೀಶ ಮಾಸ್ತರ್ ಎಂದೇ ಕರೆಯಲ್ಪಡುತ್ತಿದ್ದರು.
ಮೂಲತಃ ಕುಮಟಾ ಮತ್ತು ಅಂಕೋಲಾ ತಾಲೂಕಿನ ಗಡಿಭಾಗದ ನಾಡುಮಾಸ್ಕೇರಿಯವರಾಗಿದ್ದ ಜಗದೀಶ ನಾಯಕ ಅವರು ಶಿಕ್ಷಕ ವೃತ್ತಿಯನ್ನು ನಿರ್ವಹಿಸಿದ್ದರು. ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಲುವಾಗಿ ವೃತ್ತಿಯನ್ನು ತೊರೆದಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪದವಿಗಳನ್ನು ಪಡೆದಿರುವುದು ಅವರ ಹೆಗ್ಗಳಿಕೆ.
ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸಭೆ ಸಮಾರಂಭಗಳಲ್ಲಿ ತಮ್ಮ ಗಮನಕ್ಕೆ ತಪ್ಪು ಎಂದು ಕಂಡು ಬಂದಿರುವ ವಿಷಯವನ್ನು ಪ್ರಭುದ್ಧ ರೀತಿಯಲ್ಲಿ ಖಂಡಿಸುತ್ತಿದ್ದರು. ವಿದ್ಯಾರ್ಥಿಗಳು ಹಾಗೂ ತಮ್ಮ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಶಿಸ್ತಿನ, ಕ್ರಮಬದ್ಧ ಚೌಕಟ್ಟಿನ ಜೀವನವನ್ನು ನಡೆಸುವಂತೆ ಸದಾ ಪ್ರೇರೇಪಿಸುತ್ತಿದ್ದರು. ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ಒದಗಿಸಿದ್ದರು. ವೈಯಕ್ತಿಕ ಜೀವನ, ಆಸ್ತಿ, ಆರೋಗ್ಯ ಇವೆಲ್ಲವನ್ನೂ ಲೆಕ್ಕಿಸದೆ ಇಳಿ ವಯಸ್ಸಿನಲ್ಲಿಯೂ ನಿರಂತರವಾಗಿ ಕಾಲೇಜಿನಲ್ಲಿಯೇ ಇದ್ದು ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.
ಸಾವಿನಲ್ಲಿಯೂ ಸಾರ್ಥಕತೆ
ಶಿಕ್ಷಣ ಸಂಸ್ಥೆಗಳ ಮೂಲಕವೇ ಸಾರ್ಥಕ ಜೀವನ ನಡೆಸುತ್ತಿದ್ದ ಜಗದೀಶ ಮಾಸ್ತರ ಅವರು ಸಾವಿನ ನಂತರವೂ ದೇಹವನ್ನು ಕಾರವಾರದ ವೈದ್ಯಕೀಯ ಆಸ್ಪತ್ರೆಗೆ ನೀಡುವ ಮೂಲಕ ಸಾವಿನ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಹಲವು ದಿನಗಳಿಂದ ಜಿಲ್ಲಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ತಾಲೂಕಿನ ಗಣ್ಯರು ಶಿಕ್ಷಣ ಪ್ರೇಮಿಗಳು ಉಪನ್ಯಾಸಕರು ಮತ್ತು ನಿಕಟವರ್ತಿಗಳು ಸಂತಾಪ ಸೂಚಿಸಿದ್ದಾರೆ.