ಉತ್ತರ ಕನ್ನಡ: ಹವಾಮಾನ ವೈಪರಿತ್ಯದಿಂದ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಆಗಸ್ಟ್ ಒಂದರಿಂದ ಪ್ರಾರಂಭವಾಗಿದ್ದ ಮೀನುಗಾರಿಕೆ ಇದೀಗ ಮತ್ತೆ ಸ್ತಬ್ಧವಾಗಿದೆ. ಇದರಿಂದ ಒಂದು ಕಡೆ ಮೀನಿನ ಕೊರತೆ ಉಂಟಾದರೆ ಇನ್ನೊಂದೆಡೆ ಜೀವನಕ್ಕಾಗಿ ಮೀನುಗಾರಿಕೆಯನ್ನೇ ಅವಲಂಬಿಸಿದ ಮೀನುಗಾರರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಆರಂಭದಲ್ಲೇ ಮೀನುಗಾರಿಕೆಗೆ ತಟ್ಟಿದ ಮಳೆಯ ವಿಘ್ನ.!
ಕರಾವಳಿ ಭಾಗದಲ್ಲಿ ಪ್ರತಿವರ್ಷ ಮೀನಿನ ಸಂತತಿ ವೃದ್ಧಿಗಾಗಿ ಜೂನ್ ಮತ್ತು ಜುಲೈ ತಿಂಗಳು ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಆಗಸ್ಟ್ ತಿಂಗಳ ಮೊದಲ ದಿನದಿಂದ ಮೀನುಗಾರಿಕೆ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಮೀನುಗಾರರಿಗೆ ಸಮುದ್ರಕ್ಕೆ ತೆರಳಲು ಮಳೆಯೇ ದೊಡ್ಡ ಅಡ್ಡಿಯಾಗಿದೆ. ಕಳೆದ ನಾಲ್ಕು ದಿನದಿಂದ ಆರಂಭವಾಗಿದ್ದ ಮೀನುಗಾರಿಕೆ ಇದೀಗ ಬಂದ್ ಆಗಿದೆ. ಜಿಲ್ಲೆಯಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಈ ವಾರವಿಡೀ ಇರುವುದರಿಂದ ಮೀನುಗಾರಿಕಾ ಇಲಾಖೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ.
ಬಂದರಿನಲ್ಲಿ ಲಂಗರು ಹಾಕಿವೆ ಸಾವಿರಾರು ಬೋಟುಗಳು.!
ಜಿಲ್ಲೆಯ ಮೀನುಗಾರರಲ್ಲದೇ ಗೋವಾ, ಕೇರಳ, ತಮಿಳುನಾಡು, ಆಂಧ್ರ ಭಾಗದ ಮೀನುಗಾರರ ಬೋಟುಗಳು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶದಲ್ಲಿ ಲಂಗರು ಹಾಕಿವೆ. ಮೊದಲ ವಾರ ಪ್ರಾರಂಭವಾದ ಮೀನುಗಾರಿಕೆ ಬಿಸಿಲಿನಿಂದ ನಷ್ಟವಾದರೇ, ಈ ವಾರ ಅರಬ್ಬಿ ಸಮುದ್ರದಲ್ಲಿ ಎದ್ದ ಭೀಕರ ಗಾಳಿಯಿಂದ ಮೀನುಗಾರಿಕೆಗೆ ತೆರಳದಂತೆ ಮಾಡಿದ್ದು ಮೀನುಗಾರರಿಗೆ ನಷ್ಟ ತಂದೊಡ್ಡಿದೆ. ಹೀಗಾಗಿ ಕೃಷಿಕರಿಗೆ ನೀಡುವಂತೆ ಮೀನುಗಾರರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರಾವಳಿಯಲ್ಲಿ ಅಬ್ಬರಿಸಿದ ಮಳೆಗೆ ಮೀನುಗಾರರು ತತ್ತರ.!
ಜಿಲ್ಲೆಯಲ್ಲಿ 10 ಸಾವಿರ ಮೀನುಗಾರಿಕಾ ಬೋಟುಗಳಿವೆ. ಪ್ರತಿ ವರ್ಷ ಎರಡು ತಿಂಗಳ ಮೀನುಗಾರಿಕೆ ವಿರಾಮದ ನಂತರ ಆಗಸ್ಟ್ ನಲ್ಲಿ ರಾಜ್ಯದವರಲ್ಲದೇ ಹೊರ ರಾಜ್ಯದ ಮೀನುಗಾರಿಕಾ ಕೂಲಿ ಕಾರ್ಮಿಕರು ಕರಾವಳಿ ಭಾಗದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಬೋಟ್ ಮಾಲೀಕರು ಇರುವ ಹಣವನ್ನೆಲ್ಲಾ ಡೀಸೆಲ್ ಗೆ ಸುರಿಯುತ್ತಾರೆ. ಹೀಗಿರುವಾಗ ಮೀನಿನ ಬೇಟೆಗೆ ತೆರಳಿದ ಮೀನುಗಾರರು ಮಳೆಯಿಂದಾಗಿ ಮರಳಿ ಬರುವಂತಾಗಿದೆ. ಬೋಟ್ ಮಾಲೀಕರು ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗದೇ ನಷ್ಟ ಹೊಂದಿದರೆ, ಕೂಲಿ ಕಾರ್ಮಿಕರು ಬೋಟ್ ಗಳು ಬಂದರಿನಲ್ಲಿ ಲಂಗರು ಹಾಕಿದ್ದರಿಂದ ಕೂಲಿ ಸಹ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಆ. 11 ರ ವರೆಗೂ ಮಳೆ ಹೆಚ್ಚಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೀನುಗಾರಿಕಾ ಇಲಾಖೆ ಸಹ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿರುವುದು ಕರಾವಳಿ ಭಾಗದ ಆರ್ಥಿಕ ಮೂಲಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಅಬ್ಬರದ ಮಳೆಯ ಹೊಡೆತಕ್ಕೆ ಕರಾವಳಿಯ ಮೀನುಗಾರರು ತತ್ತರಿಸಿಹೋಗಿದ್ದಾರೆ.