ಜೊಯಿಡಾ: ವಿದ್ಯಾರ್ಥಿಗಳು ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಲ್ಲೂ ವೈಶಿಷ್ಟ್ಯತೆ ಇದೆ. ಸಮಯ ಮತ್ತು ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ನಮ್ಮ ಜೀವನ ನಾವೇ ರೂಪಿಸಿಕೊಳ್ಳಬೇಕೆಂದು ಅಣಶಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ. ವಿ. ಎಮ್ ಅವರು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಶುಕ್ರವಾರ ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಹಲವು ಸಮಸ್ಯೆಗಳ ನಡುವೆ ಇಲ್ಲಿನ ಹಳ್ಳಿಗರು ಸಾಧನೆ ಮಾಡುತ್ತಿದ್ದಾರೆ. ಜೀವನದಲ್ಲಿ ಕಲಿಯುವಂತದ್ದು ಬಹಳಷ್ಟಿದೆ. ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಗುರಿ ದೃಡವಾಗಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಕಿವಿಮಾತುಗಳನ್ನು ಹೇಳಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಮಾರ್ಗದರ್ಶನ ನೀಡಿದರು.
ಶಿಕ್ಷಣ ಪ್ರೇಮಿ ಡಾ.ಜಯಾನಂದ ಡೇರೆಕರ ಮಾತನಾಡಿ ಸೌಕರ್ಯಗಳ ಕೊರತೆ ಹಾಗೂ ಹಲವು ಸಮಸ್ಯೆಗಳ ನಡುವೆ ಇಲ್ಲಿನ ಉಪನ್ಯಾಸಕರು ಶಿಕ್ಷಣದಲ್ಲಿ ಸಾಧನೆ ಮಾಡಿದ್ದು, ಅವರೆ ಇಲ್ಲಿನ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಇಂದು ಎಲ್ಲ ಬಗೆಯ ಸೌಕರ್ಯಗಳಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಓದುವ ಹವ್ಯಾಸ ಇದ್ದರೆ ಮಾತ್ರ ಸಾಧನೆ ಸಾಧ್ಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ ಕಾಮತ್ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯಲ್ಲಿ ತಂದೆ,ತಾಯಿ,ಗುರುಗಳು, ಸಮಾಜದ ಪಾಲು ಇರುತ್ತದೆ, ಪಾಲಕರಿಟ್ಟ ಭರವಸೆ ಹುಸಿ ಮಾಡದೇ ಪಾಲಕರ ತ್ಯಾಗ, ಪರಿಶ್ರಮಕ್ಕೆ ತಕ್ಕ ಸಾಧನೆಯನ್ನು ವಿಧ್ಯಾರ್ಥಿಗಳು ಮಾಡಬೇಕೆಂದರು.
ಕಳೆದ ವರ್ಷ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರೇಮಾನಂದ ವೇಳಿಪ ಮತ್ತು ಓಂಕಾರ ವೇಳಿಪ್ ಅವರನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ವಿ ಆರ್ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಥಶಾಸ್ತ್ರ ಉಪನ್ಯಾಸಕ ಜ್ಞಾನೇಶ್ವರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು, ಸುನಿಲ್ ಶೇಟಕರ್ ಸ್ವಾಗತಿಸಿದರು, ರಾಘವೇಂದ್ರ ದೇಸಾಯಿ ವರದಿ ವಾಚಿಸಿದರು. ಕುಂಬಾರವಾಡ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ, ಉಪನ್ಯಾಸಕರಾದ ಸುದರ್ಶನ್ ಗಾವಡಾ, ಸುವರ್ಣ ಜೆಡಿಪಲ್ಲೆ, ಸುನಿತಾ ಕುಣಬಿ, ಚಂದ್ರಕಲಾ ಗಾವಡಾ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.