ಯಲ್ಲಾಪುರ: ಸೀತಾರಾಮ ಸಂಜೀವಿನ ಗ್ರಾಪಂ ಒಕ್ಕೂಟದ ಅಡಿಯಲ್ಲಿ ಸರ್ಕಾರಿ ಅನುದಾನದಲ್ಲಿ ಲಿಂಗದಬೈಲ್ ಬಳಿ ಬುಡಕಟ್ಟು ಸಮುದಾಯದವರಿಗಾಗಿಯೇ ಮಾಡಿದ ಹೋಂ ಸ್ಟೇ ಯಲ್ಲಿ ಬುಡಕಟ್ಟು ಸಿದ್ದಿ ಸಮುದಾಯದವರನ್ನು ಕಡೆಗಣಿಸಲಾಗಿದೆ ಎಂದು ಎಂದು ನಿಸರ್ಗ ಸ್ಪರ್ಶ ಟ್ರೈಬಲ್ ಹೊಮ್ ಮಾಜಿ ಅಧ್ಯಕ್ಷೆ ರಾಜೇಶ್ವರಿ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.3 ರಂದು ಹೋಂ ಸ್ಟೇ ಉದ್ಘಾಟನೆಗೊಳ್ಳಲಿದ್ದು, ನಮಗೆ ಆಗಿರುವ ಅನ್ಯಾಯ ಖಂಡಿಸಿ ಅಂದು ಬೆಳಗ್ಗೆ 10 ಕ್ಕೆ ಹೋಂ ಸ್ಟೇ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಸರ್ಕಾರದ ಅನುದಾನದೊಂದಿಗೆ ಸಿದ್ದಿ ಸಮುದಾಯದವರೇ ನಡೆಸುವ ಹೋಂ ಸ್ಟೇ ಆರಂಭಿಸುವ ಕುರಿತು ಮೂರು ವರ್ಷಗಳ ಹಿಂದರ ಒಕ್ಕೂಟದ ಸದಸ್ಯರು ಒಗ್ಗಟ್ಟಾಗಿ ಶ್ರಮಿಸಿದಾಗ ಅಂದಿನ ಜಿ ಪಂ ಇಒ ಆಗಿದ್ದ ಪ್ರಿಯಾಂಗಾ ಪ್ರೋತ್ಸಾಹ ನೀಡಿದ್ದರು. ಅವರ ಮಾರ್ಗದರ್ಶನಲ್ಲಿ ನಿಸರ್ಗ ಸ್ಪರ್ಶ ಹೋಂ ಸ್ಟೇ ಎಂಬ ಹೆಸರಿನೊಂದಿಗೆ ರೂಪುರೇಷೆ ಸಿದ್ಧಪಡಿಸಿ, ಸಿದ್ದಿ ಸಂಸ್ಕೃತಿ ಬಿಂಬಿಸುವ ಬಗೆಗೂ ಯೋಜನೆ ರೂಪಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಜಿ.ಪಂ ಸಿಇಒ ಪ್ರಿಯಾಂಗಾ ಅವರು ವರ್ಗಾವಣೆಗೊಂಡಿದ್ದು, ಅಲ್ಲಿಂದ ನಮಗೆ ಅನ್ಯಾಯ ಆರಂಭವಾಯಿತು ಎಂದು ವಿವರಿಸಿದರು.
ನೂತನ ಜಿ.ಪಂ ಸಿಇಒ ಈಶ್ವರ ಕಾಂದೂ ಹಾಗೂ ಕೆಳಹಂತದ ಅಧಿಕಾರಿಗಳು ಸಿದ್ದಿ ಸಮುದಾಯದವರಿಗೆ ಯಾವುದೇ ಮನ್ನಣೆ ನೀಡದೇ, ತಮಗೆ ಬೇಕಾದಂತೆ ಕಾರ್ಯನಿರ್ವಹಿಸಲಾರಂಭಿಸಿದರು. ಕೇರಳದ ಕಬಿನಿ ಎಂಬ ಸಂಸ್ಥೆಗೆ ಹೋಂ ಸ್ಟೇ ನಿರ್ವಹಣೆಯ ಹೊಣೆ ವಹಿಸಲಾಗಿದೆ. ಅಲ್ಲಿ ಸಿದ್ದಿ ಸಮುದಾಯದವರನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವ ಯೋಜನೆ ನಡೆದಿದೆ. ಈ ಬಗ್ಗೆ ಪ್ರಶ್ನಿಸುವವರನ್ನು ಹೋಂ ಸ್ಟೇ ಸಮಿತಿಯಿಂದಲೇ ಕಿತ್ತು ಹಾಕಲಾಗಿದೆ. ಹೊಸದಾಗಿ ನೇಮಕವಾದ ಅಧ್ಯಕ್ಷರ ಹೆಸರನ್ನೂ ಆಮಂತ್ರಣದಲ್ಲಿ ನಮೂದಿಸಿಲ್ಲ ಎಂದು ಆರೋಪಿಸಿದರು.
ಇದೀಗ ಫೆ.3 ರಂದು ಉದ್ಘಾಟನೆಗೆ ಸಿದ್ಧಗೊಂಡಿರುವ ಹೋಂ ಸ್ಟೇ ಯ ಹೆಸರು ಬದಲಾಯಿಸಲಾಗಿದೆ. ಡಮಾಮಿ ಸಮುದಾಯ ಪ್ರವಾಸೋದ್ಯಮ ಎಂದು ಹೆಸರಿಸಲಾಗಿದೆ. ಡಮಾಮಿ ಎಂಬ ಸಮುದಾಯವೇ ಇಲ್ಲ. ಅದೊಂದು ನೃತ್ಯ ಪ್ರಕಾರ ಮಾತ್ರ. ಹಾಗಿದ್ದೂ ಅಂತಹ ಹೆಸರಿಟ್ಟು ಸಿದ್ದಿ ಸಮುದಾಯದವರಿಗೆ ಅವಮಾನ ಮಾಡಲಾಗಿದೆ ಎಂದು ದೂರಿದರು. ಅನ್ಯಾಯ ಖಂಡಿಸಿ, ಫೆ.3 ರಂದು ಉದ್ಘಾಟನೆ ವೇಳೆ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದೆಂದರು.
ಗ್ರಾಪಂ ಸದಸ್ಯ ಗೋಪಾಲ ಸಿದ್ದಿ, ಸಮುದಾಯದ ಪ್ರಮುಖರಾದ ಗಣಪತಿ ಸಿದ್ದಿ, ಅನಂತ ಸಿದ್ದಿ, ಸೀತಾ ಸಿದ್ದಿ, ಕುಸುಮಾ ಸಿದ್ದಿ, ಅನಿತಾ ಸಿದ್ದಿ,
ಮೀನಾಕ್ಷಿ ಸಿದ್ದಿ, ದೇವಕಿ ಸಿದ್ದಿ, ಮಹಾದೇವಿ ಸಿದ್ದಿ ಇದ್ದರು.