ಸಂಸತ್​ನಲ್ಲಿ ಇಂದು ಮಧ್ಯಂತರ ಬಜೆಟ್ ಮಂಡನೆ; ಏನಿದೆ ನಿರೀಕ್ಷೆ?

ನವದೆಹಲಿ, ಫೆಬ್ರುವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಗುರುವಾರ (ಫೆ. 1)ಸಂಸತ್​ನಲ್ಲಿ ಮಧ್ಯಂತರ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು. ಎನ್​ಡಿಎ-2 ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು ಸತತ ಆರನೇ ಬಜೆಟ್ ಕೂಡ ಆಗಿದೆ. ಮೊದಲ ಮಧ್ಯಂತರ ಬಜೆಟ್ ಕೂಡ ಅವರದ್ದಾಗಿದೆ. ಚುನಾವಣೆಗೆ ಮುಂಚಿನ ಬಜೆಟ್ ಇದಾದ್ದರಿಂದ ಸಾಕಷ್ಟು ಕುತೂಹಲವೂ ಇದೆ. ಆದರೆ, ಚುನಾವಣೆ ಬಳಿಕ ಮತ್ತೆ ಪೂರ್ಣ ಬಜೆಟ್ ಮಂಡನೆ ಆಗುವುದರಿಂದ ಈ ಮಧ್ಯಂತರ ಬಜೆಟ್​ಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಆದರೂ ಕೂಡ ಸರ್ಕಾರದ ಮುಂದಿನ ದಾರಿ ಬಗ್ಗೆ ಇರುವ ದೃಷ್ಟಿಕೋನ ಈ ಬಜೆಟ್​ನಿಂದ ತಿಳಿಯಬಹುದು.

ನಿನ್ನೆ ಜನವರಿ 31ರಂದು ಬಜೆಟ್ ಅಧಿವೇಶನ ಚಾಲನೆಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್​ನಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ದೇಶದ ಆರ್ಥಿಕ ಬೆಳವಣಿಗೆಯ ವಿವರ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಜೆಟ್ ಅನ್ನು ನಾರಿ ಶಕ್ತಿ ವೈಭವ ಎಂದು ಬಣ್ಣಿಸಿದರು. ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೂ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಸಂಸತ್​ನಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮೇಲೆ ಚರ್ಚೆಗಳಾಗಬಹುದು.

ಬಜೆಟ್ ಹಿಂದಿನ ದಿನ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಮಧ್ಯಂತರ ಬಜೆಟ್ ಆದ್ದರಿಂದ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಿಲ್ಲ. ಅದರ ಬದಲು ಜನವರಿ 29ರಂದು ಆರ್ಥಿಕ ವ್ಯವಹಾರಗಳ ಸಚಿವಾಲಯದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಪರಾಮರ್ಶೆ ವರದಿ ಮಾತ್ರ ಪ್ರಕಟವಾಗಿತ್ತು. ಅದು ದೇಶದ ಮುಂದಿನ ಎರಡು ವರ್ಷಗಳ ಆರ್ಥಿಕ ಬೆಳವಣಿಗೆಯ ಅಂದಾಜು ಸೇರಿದಂತೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿತ್ತು.

ಈ ಮಧ್ಯಂತರ ಬಜೆಟ್​ನಲ್ಲಿ ಲೇಖಾನುದಾನಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಸರ್ಕಾರದ ಖರ್ಚು ವೆಚ್ಚಗಳಿಗೆ ಲೇಖಾನುದಾನ ಅನುವು ಮಾಡಿಕೊಡುತ್ತದೆ.

ಈ ಬಜೆಟ್​ನಲ್ಲಿ ಸಂಬಳದಾರರಿಗೆ ಬಹಳ ಮುಖ್ಯವಾದ ಆದಾಯ ತೆರಿಗೆ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಬಹುದು. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚುವ ಸಾಧ್ಯತೆ ಇದೆ ಎಂದು ಹಲವರು ನಿರೀಕ್ಷಿಸಿದ್ದಾರೆ. ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಇತ್ಯಾದಿ ವೆಚ್ಚಕ್ಕೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಬೇಕೆಂಬ ಕೂಗು ಇದೆ.

ಹಾಗೆಯೇ, ಇವಿ ವಲಯ, ಕೃಷಿ, ಸಣ್ಣ ಉದ್ದಿಮೆ ಮೊದಲಾದವುಗಳು ಒಂದಷ್ಟು ನೀತಿ ಬದಲಾವಣೆಗಳನ್ನು ಬಯಸಿವೆ. ಒಟ್ಟಾರೆಯಾಗಿ, ಬೆಳಗ್ಗೆ 11 ಗಂಟೆಯ ಬಳಿಕ ಬಜೆಟ್​ನಲ್ಲಿ ಯಾವೆಲ್ಲಾ ಹೂರಣಗಳಿವೆ ಎಂಬುದು ಸ್ಪಷ್ಟವಾಗುತ್ತದೆ.