ನವದೆಹಲಿ, ಜನವರಿ 31: ಸಾಮಾನ್ಯವಾಗಿ ಬಜೆಟ್ಗೆ ಮುಂಚೆ ಆರ್ಥಿಕ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವುದು ವಾಡಿಕೆ. ಬಜೆಟ್ ಹಿಂದಿನ ದಿನದಂದು ಇದನ್ನು ಬಹಿರಂಗಪಡಿಸಲಾಗುತ್ತದೆ. ಆದರೆ, ಏಪ್ರಿಲ್, ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಈ ಬಾರಿ ಪೂರ್ಣ ಬಜೆಟ್ ಬದಲು ಮಧ್ಯಂತರ ಬಜೆಟ್ ಮಾತ್ರವೇ ಇರುತ್ತದೆ. ಹಾಗೆಯೇ, ಆರ್ಥಿಕ ಸಮೀಕ್ಷಾ ವರದಿಯನ್ನು ಪ್ರಸ್ತುಪಡಿಸುವಂತಿಲ್ಲ. ಹೀಗಾಗಿ, ಇಂದು ಪ್ರಸ್ತುತಪಡಿಸಬೇಕಿದ್ದ ಆರ್ಥಿಕ ಸಮೀಕ್ಷಾ ವರದಿ ಇರುವುದಿಲ್ಲ. ಅದರ ಬದಲು ಎರಡು ದಿನಗಳ ಹಿಂದೆಯೇ ಬೇರೆಯ ಆರ್ಥಿಕ ಪರಾಮರ್ಶೆ ವರದಿ ಬಿಡುಗಡೆ ಆಗಿದೆ.
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಎಕನಾಮಿಕ್ ಸರ್ವೆ ರಿಪೋರ್ಟ್ ಅನ್ನು ಬಿಡುಗಡೆ ಮಾಡುತ್ತಾರೆ. ಈಗ ಅವರದೇ ಆರ್ಥಿಕ ವ್ಯವಹಾರಗಳ ಇಲಾಖೆ ಪರ್ಯಾಯ ವರದಿ ತಯಾರಿಸಿದೆ. ದೇಶದ ಆರ್ಥಿಕ ಬೆಳವಣಿಗೆಯ ಶಕ್ತಿ ಮತ್ತು ದಿಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ‘ದಿ ಇಂಡಿಯನ್ ಎಕನಾಮಿ- ಎ ರಿವ್ಯೂ’ ವರದಿಯನ್ನು ಜನವರಿ 29ರಂದು ಬಿಡುಗಡೆ ಮಾಡಲಾಗಿದೆ. ಹಾಲಿ ಇರುವ ಆರ್ಥಿಕ ಪರಿಸ್ಥಿತಿ ಮತ್ತು ಮುಂದಿನ ದಿನಗಳಲ್ಲಿನ ಸಾಧ್ಯತೆಗಳೇನು ಎಂದು ಈ ವರದಿಯಲ್ಲಿ ಪರಾಮರ್ಶಿಸಲಾಗಿದೆ.
ಆರ್ಥಿಕ ಸಮೀಕ್ಷೆಯಾಗಲೀ, ಈಗ ಪ್ರಕಟವಾಗಿರುವ ಪರ್ಯಾಯ ಆರ್ಥಿಕ ವರದಿಯಾಗಲೀ ಬಜೆಟ್ಗೆ ಸಂಬಂಧಿಸಿದ್ದಲ್ಲ. ಪೂರ್ವಭಾವಿಯಾಗಿ ಮಾತ್ರವೇ ಇದನ್ನು ಪ್ರಸ್ತುಪಡಿಸಲಾಗುತ್ತದೆ. ದೇಶದ ಆರ್ಥಿಕ ಚಿತ್ರಣ ಹೇಗಿದೆ ಎಂದು ಜನಸಾಮಾನ್ಯರ ಕಣ್ಮುಂದೆ ತರಲು ಈ ವರದಿ ಸಹಾಯವಾಗುತ್ತದೆ.
ಭಾರತೀಯ ಆರ್ಥಿಕತೆಯ ಪರಾಮರ್ಶೆ ವರದಿಯ ಮುಖ್ಯಾಂಶಗಳು
- ಮುಂದಿನ 3 ವರ್ಷದಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.
- 2030ರೊಳಗೆ ಭಾರತದ ಆರ್ಥಿಕತೆ 7 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.
- 2023-24ರ ಹಣಕಾಸು ವರ್ಷದಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಸರಾಸರಿ ಶೇ. 3 ಮಾತ್ರವೇ ಇದ್ದರೆ, ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7.2 ಅನ್ನು ದಾಟಬಹುದು.
- ಸತತ ಮೂರನೇ ವರ್ಷ ಭಾರತದ ಜಿಡಿಪಿ ದರ ಶೇ. 7 ಮೀರಲಿದೆ.
- ಕಳೆದ ಒಂದು ದಶಕದಲ್ಲಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹೆ್ಚ್ಚಿದೆ. ಹಣಕಾಸು ವಲಯ ಬಲಯುತವಾಗಿದೆ. ಆಹಾರೇತರ ಸಾಲಗಳ ವೃದ್ಧಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ಚುರುಕು ಮುಟ್ಟಿಸಿದೆ.
- ವಿಶ್ವದ ಅತಿದೊಡ್ಡ ಫಿನ್ಟೆಕ್ ಆರ್ಥಿಕತೆಗಳ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರಿಟನ್ ನಂತರದ ಸ್ಥಾನ ಭಾರತದ್ದಾಗಿದೆ.
- ವಿಶ್ವದ ಅತಿದೊಡ್ಡ ಸ್ಟಾಕ್ ಮಾರ್ಕೆಟ್ಗಳಲ್ಲಿ ಹಾಂಕಾಂಗ್ ಅನ್ನು ಮೀರಿಸಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ.
- ಪಿಎಂ ಜನ್ ಧನ್ ಯೋಜನೆಯ ಪರಿಣಾಮವಾಗಿ ದೇಶದಲ್ಲಿ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಸಂಖ್ಯೆ ಹೆಚ್ಚಾಗಿದೆ. 2015-16ರಲ್ಲಿ ಶೇ. 53ರಷ್ಟು ಮಹಿಳೆಯರು ಬ್ಯಾಂಕ್ ಖಾತೆ ಹೊಂದಿದ್ದರೆ, 2019-20ರಲ್ಲಿ ಈ ಸಂಖ್ಯೆ ಶೇ. 7.6ಕ್ಕೆ ಏರಿದೆ.
- 2017-18ರಲ್ಲಿ ಶೇ. 23.3ರಷ್ಟು ಇದ್ದ ಮಹಿಳಾ ಕಾರ್ಮಿಕ ಪಾಲ್ಗೊಳ್ಳುವಿಕೆ ದರ 2022-23ರಲ್ಲಿ ಶೇ. 37ಕ್ಕೆ ಏರಿದೆ.
- ಸ್ಕಿಲ್ ಇಂಡಿಯಾ ಮಿಷನ್, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಮೊದಲಾದ ಯೋಜನೆಗಳಿಂದಾಗಿ ಆದಾಯ ಹೆಚ್ಚಳದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿದೆ.
- ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಬಹಳ ಹೆಚ್ಚಾಗಿದೆ.
- ದೇಶದಲ್ಲಿ ಎಂಎಸ್ಎಂಇ ಸಂಸ್ಥೆಗಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತಿವೆ.