ಹೊನ್ನಾವರದ ಕಾಸರಕೋಡ್ ವಾಣಿಜ್ಯ ಬಂದರು ವಿವಾದ – ಸಹಾಯಕ ಆಯುಕ್ತರು ಮತ್ತು ಮೀನುಗಾರರ ನಡುವೆ ವಾಗ್ವಾದ

ಹೊನ್ನಾವರ : ತಾಲೂಕಿನ ಕಾಸರಕೋಡ್ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಸಹಾಯಕ ಆಯುಕ್ತರ ನೇತ್ರತ್ವದಲ್ಲಿ ಸರ್ವೆಗೆ ಮುಂದಾದ ಹಿನ್ನೆಲೆ ಮೀನುಗಾರರು ಏಕಾಎಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ…

ಸಹಾಯಕ ಆಯುಕ್ತೆ ಡಾ.ನಯನಾ ಅವರ ನೇತ್ರತ್ವದಲ್ಲಿ ಹೈಟೈಡ್ ಲೈನ್ ಸರ್ವೆಗೆ ಸಜ್ಜಾಗಿದ್ದರು. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾವಣೆಗೊಂಡರು. ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ, ಸಿಪಿಐ ಸಂತೋಷ್ ಕಾಯ್ಕಿಣಿ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇದೇ ವೇಳೆ ಎಸಿ ಡಾ.ನಯನಾ ಅವರು ಸರ್ವೆ ಕಾರ್ಯ ನಡೆಸಲು ಅನುವು ಮಾಡಿಕೊಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು.

ಆದರೆ ಮೀನುಗಾರರರು, ಅಧಿಕಾರಿಗಳ ಮಾತಿಗೆ ಜಗ್ಗದೆ ವಾಗ್ವಾದ ನಡೆಸಿದರು. ಮೀನುಗಾರರ ಮುಖಂಡರಾದ ಜಗ್ಗು ತಾಂಡೇಲ್,  ರಾಜು ತಾಂಡೇಲ್ ಮಾತನಾಡಿ, ಅನಾದಿಕಾಲದಿಂದಲೂ ಇಲ್ಲಿ ಮೀನುಗಾರರು ಬದುಕನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರ ಮೊದಲು ನಮ್ಮ‌ ಇರುವಿಕೆಯನ್ನು ಗುರುತಿಸಬೇಕು. ಈ ಹಿಂದೆ ಸರ್ಕಾರಿ ಅಧಿಕಾರಿಗಳು ಸರ್ವೆ ಕಾರ್ಯ ಎಂದು ಸ್ಥಳಕ್ಕೆ ಭೇಟಿ ನೀಡಿದ್ದರು. ರಸ್ತೆ ಮಾಡುವಾಗ ನಮ್ಮನ್ನೆಲ್ಲ ಬಂಧಿಸಿ ಜೈಲಲಿಟ್ಟಿದ್ದರು. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಮುಂದಿನ ತಲೆಮಾರು ಇಲ್ಲಿ ಬದುಕು ಕಟ್ಟಿಕೊಳ್ಳಲು ವಾಣಿಜ್ಯ ಬಂದರು ವಿರೋಧಿಸಿ ನಾವು ಇಂದು ಹೊರಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು..

ಈ ಜಾಗದಲ್ಲಿ ಹೈ ಟೈಡ್ ಲೈನ್ ಸರ್ವೆ ಮಾಡುತ್ತೇವೆ. ನಿಮಗೆ ಯಾವುದೇ ರೀತಿ  ಮೋಸವಾಗುವುದಿಲ್ಲ. ಸರ್ಕಾರದ ಆದೇಶದ ಪ್ರಕಾರ ನಾವಿಲ್ಲಿ ಸರ್ವೆಗೆ ಬಂದಿದ್ದೇವೆ. ಅವಕಾಶ ಮಾಡಿಕೊಡಿ ಎಂದು ಎಸಿ ಡಾ.ನಯನಾ ಅವರು ಮೀನುಗಾರರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದ್ರೆ ಸರ್ವೇ ಮಾಡಲು ಸೂಕ್ತ ದಾಖಲಾತಿ, ಆದೇಶ ಪ್ರತಿಯೊಂದಿಗೆ ಬನ್ನಿ ಎಂದು ಮೀನುಗಾರ ಗಣಪತಿ ತಾಂಡೇಲ್  ಅಧಿಕಾರಿಗಳಿಗೆ ಹೇಳಿದರು. ಸರ್ವೇ ಉದ್ದೇಶದ ಬಗ್ಗೆ ಸ್ಪಷ್ಟ ವಿವರಣೆ ನೀಡುವಂತೆ ಆಗ್ರಹಿಸಿದ್ರು..

ಜಿಲ್ಲೆಯ ಬೇರೆ ಕಡಲ ತೀರದಲ್ಲಿ ಯಾಕೆ ಹೈಟೈಡ್ ಲೈನ್ ಸರ್ವೆ ಮಾಡುತ್ತಿಲ್ಲ. ಇಲ್ಲಿ ಮಾತ್ರ ಯಾಕೆ ಸರ್ವೆ ನಡೆಸುವುದು ಎಂದು ಮೀನುಗಾರರು ಪ್ರಶ್ನೆಯೆತ್ತಿದ್ರು. ಇದು ಕಂಪನಿ ಪರವಾಗಿ ಬಂದ ಸರ್ವೆಯೋ ಅಥವಾ ಸರ್ಕಾರದ ಆದೇಶದಿಂದ ಬಂದಿರುವುದೋ ಎಂದು ಕಡಲಮಕ್ಕಳು ಗರಂ ಆಗಿ ಆಕ್ರೋಶ ಹೊರಹಾಕಿದರು. ಇದು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದರಿಂದ ನಾನು ಸರ್ಕಾರದ ಆದೇಶ ಪ್ರಕಾರವಾಗಿ ಇಲ್ಲಿಗೆ ಸರ್ವೇ ನಡೆಸಲು ಬಂದಿದ್ದೇನೆ. ಇಲ್ಲಿ ಸಿಆರ್‌ಝಡ್  ಜೊನ್ ಮ್ಯಾಪಿಂಗ್ ಮಾಡಲು ಸರ್ವೇ ನಡೆಸುತ್ತಿರುವುದು ಎಂದು ಎಸಿಯವರು ಉತ್ತರಿಸಿದರು.

ಕೆಲಕಾಲ ಮೀನುಗಾರರು ಮತ್ತು ಎಸಿಯವರ ನಡುವೆ ತೀವ್ರ ವಾಗ್ವಾದ ಮುಂದುವರೆಯಿತು. ಕೊನೆಗೆ ತಾವು ಸರ್ವೇ ಕಾರ್ಯ ನಡೆಸಿಯೇ ನಡೆಸುತ್ತೇವೆ ಎಂದು ಎಸಿಯವರು ಹೇಳಿದರು. ‌ಮೀನುಗಾರರು ಜಾಗದಿಂದ ತೆರಳದೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪ್ರತಿಭಟನೆ ಮುಂದುವರೆಸಿದರು. ಸಚಿವ ಮಂಕಾಳ ವೈದ್ಯರು ಮಧ್ಯಪ್ರವೇಶ ಮಾಡಿ ಮೀನುಗಾರರಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಆಗ್ರಹ ಕೇಳಿ ಬಂತು. ಒಟ್ಟಿನಲ್ಲಿ ಕಾಸರಕೋಡ್ ವಾಣಿಜ್ಯ ಬಂದರು ವಿವಾದ ಬಗೆಹರಿಯದ ವಿವಾದವಾಗಿದೆ. ಇಲಾಖಾ ಅಧಿಕಾರಿಗಳು ಇಲ್ಲಿನ ಜನತೆಗೆ ಸ್ಪಷ್ಟತೆ ನೀಡದೆ ಏಕಾಎಕಿ ಸರ್ಕಾರದ ಆದೇಶ ಎಂದು ಪೊಲೀಸ್ ನಿಯೋಜನೆಯೊಂದಿಗೆ ಭೇಟಿ ನೀಡುತ್ತಿದ್ದಾರೆ. ಮೊದಲೇ ಪ್ರತಿಭಟಿಸಿ ರೋಸಿ ಹೋದ ಜನತೆಗೆ ಸರ್ವೇ ನಡೆಸುವ ಉದ್ದೇಶದ ಸರಿಯಾದ ಮಾಹಿತಿ ಇಲ್ಲದೇ ಪ್ರತಿಭಟಿಸುವುದು ಅನಿವಾರ್ಯವಾಗುತ್ತಿದೆ