ಹೆಬಳೆ ತೆಂಗಿನಗುಂಡಿ ಬೀಚ್‌ ಗೆ ವೀರ ಸಾವರ್ಕರ ನಾಮಫಲಕ ಮತ್ತು ಭಗವಾ ಧ್ವಜ ಅಳವಡಿಕೆ ವಿಚಾರ

ಭಟ್ಕಳ : ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೀರ ಸಾವರ್ಕರ ನಾಮಫಲಕವನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿಯು ಪೋಲಿಸ್ ಬಂದೋಬಸ್ತನಲ್ಲಿ ಶನಿವಾರದಂದು ಏಕಾಏಕಿ ತೆರವುಗೊಳಿಸಿರುವ ವಿಚಾರದಲ್ಲಿ ಮಂಗಳವಾರದಂದು ಹೆಬಳೆ ಪಂಚಾಯತ ಸದಸ್ಯರು ಪ್ರಶ್ನಿಸಿ ಪತ್ರಿಭಟನೆ ನಡೆಸಿ ಅಧಿಕಾರಗಳಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆ ಪುನಃ ಸಂಜೆ ವೇಳೆ ಧ್ವಜ ಸ್ಥಂಬ ಕಟ್ಟಿದ ಘಟನೆ ನಡೆದಿದೆ.

ಜನವರಿ 27 ಶನಿವಾರದಂದು ತಾಲೂಕಿನ ತೆಂಗಿನಗುಂಡಿ ಬಂದರು ಸಮೀಪ ತೆಂಗಿನಗುಂಡಿ ಬೀಚ್ ಬಳಿ ಸಾವರ್ಕರ್ ಬೀಚ್ ಎಂದು ಬರೆದ ಬೋರ್ಡನ್ನು ನಿಲ್ಲಿಸಿ ಅದೇ ಕಂಬಕ್ಕೆ ಕೇಸರಿ ಬಟ್ಟೆಯನ್ನು ಸುತ್ತಿ ಭಗದ್ವಜವನ್ನು ಹಾಕಲಾಗಿದ್ದು, ಈ ವಿಷಯವು ಹೆಬಳೆ ಪಂಚಾಯತ ಪಿ.ಡಿ.ಒ. ಅವರಿಗೆ ತಿಳಿದು ಅವರು ಸರಕಾರಿ ರಜೆಯ ಮಧ್ಯೆಯು ಪೊಲೀಸ್ ಬಂದೋಬಸ್ತನಲ್ಲಿ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಹಾಕಲಾದ ಬೋರ್ಡ್, ಭಗವಾ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದಾರೆ. ಆ ಬಳಿಕ ಮಂಗಳವಾರದಂದು ಈ ವಿಚಾರವನ್ನು ಪ್ರಶ್ನಿಸಿ

ಜನವರಿ 24 ರಂದು ಹೆಬಳೆ ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಅರ್ಜಿಯಂತೆ ಅನಧಿಕೃತವಾಗಿರುವ ನಾಮಫಲಕವನ್ನು ತೆರವುಗೊಳಿಸಿ ಎಂಬುದಾಗಿ ಬಂದ ದೂರಿನ ಅರ್ಜಿಯನ್ನು ಚರ್ಚಿಸಿ ಅತಿ ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸಲು ಅಧ್ಯಕ್ಷರು ಹಾಗೂ ಸದಸ್ಯರು ಪಿಡಿಓಗಳಿಗೆ ಸೂಚಿಸಿದ್ದರು. ಆದರೆ ಪಂಚಾಯತ ಪಿಡಿಓ ಅಧಿಕಾರಿಗಳು ಅಂತಹ ನಾಮಫಲಕ ತೆರವುಗೊಳಿಸದೇ ಏಕಾಏಕಿ ತೆಂಗಿನಗುಂಡಿ ಬೀಚ್ ನಲ್ಲಿ ಹಾಕಲಾದ ನಾಮಫಲಕ ತೆರವಿಗೆ ಮುಂದಾಗಿದ್ದರು.

ಈ ವಿಚಾರವಾಗಿ ಹೆಬಳೆ 12 ಸದಸ್ಯರು ಪಿಡಿಓ ಅಧಿಕಾರಿಗಳ ಬಳಿ ಮಂಗಳವಾರದಂದು ಬಿಜೆಪಿ ಮಂಡಲ ಅಧ್ಯಕ್ಷ ಮತ್ತು ಹೆಬಳೆ ಪಂಚಾಯತ ಸದಸ್ಯ ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಪಂಚಾಯತ್ ಎದುರು ಪಿಡಿಓ ಕ್ರಮದ ವಿರುದ್ದ ಧರಣಿ ಕುಳಿತರು. ಸತತ 2 ಗಂಟೆಗಳ‌ ಕಾಲ ಧರಣಿ ಕುಳಿತಿದ್ದರು ಸಹ ಯಾವುದೇ ಸ್ಪಂದನೆ ನೀಡಿಲ್ಲ. ಸಂಜೆ 4 ಗಂಟೆಯ ತನಕ ಧರಣಿ ನಡೆಸಿದ ಸದಸ್ಯರು ಆ ಬಳಿಕ ತೆಂಗಿನಗುಂಡಿ ಬೀಚ್ ಬಳಿ ತೆರವು ಮಾಡಿದ್ದ ಧ್ವಜ ಸ್ಥಂಭದ ಕಟ್ಟೆಯನ್ನು ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪುನಃ ನಿರ್ಮಿಸಿದರು.

ಸ್ಥಳಕ್ಕೆ ಬಂದ ತಹಸೀಲ್ದಾರ ತಿಪ್ಪೇಸ್ವಾಮಿ ಅವರು ಪ್ರತಿಭಟನಾಕಾರರ ಜೊತೆಗೆ ಚರ್ಚಿಸಿದರು. ಈ ವೇಳೆ ಹೆಬಳೆ ಗ್ರಾಮ ಪಂಚಾಯತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅನಧೀಕೃತ ನಾಮಫಲಕ ತೆರವಿಗೆ 15 ದಿನದ ಕಾಲಾವಕಾಶ ನೀಡಿದ್ದು ನಂತರ ಅವೆಲ್ಲವು ಖುಲ್ಲಾ ಆದ ಬಳಿಕ ವೀರ ಸಾವರ್ಕರ ಬೀಚನ ಕಟ್ಟೆ ಮತ್ತು ನಾಮ ಫಲಕದ ವಿಚಾರ ಮುಂದುವರೆಯಬೇಕು. ಈ ಕುರಿತಾಗಿ ಪಂಚಾಯತನಿಂದ ಪರವಾನಿಗೆ ಪಡೆಯುವ ಸಂಬಂಧ ಸದಸ್ಯರು ಮುಂದುವರೆಯಲಿದ್ದೇವೆ ಎಂದು ತಹಸೀಲ್ದಾರ ಅವರಿಗೆ ಪಂಚಾಯತ ಸದಸ್ಯ, ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು. ಇದೇ ವೇಳೆ ಪ್ರತಿಭಟನಾಕಾರರು ಧ್ವಜ ಕಟ್ಟೆ ಪುನಃ ನಿರ್ಮಿಸಿದರು.

ನಂತರ ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ ‘ ಉಳಿದೆಲ್ಲ ಅನಧೀಕ್ರತ ನಾಮಫಲಕ ತೆರವು ಮಾಡಿ ಖುಲ್ಲಾ ಆಗುವ ತನಕ ಈಗ ನಿರ್ಮಿಸಲಾದ ಧ್ವಜ ಕಟ್ಟೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. 15 ದಿನದ ಮುಂಚಿತವಾಗಿ ನೋಟಿಸ್ ನೀಡಿ ತೆರವು ಮಾಡಬೇಕಾಗಿದ್ದ ಪಿಡಿಓ ಅಧಿಕಾರಿಗಳು ಏಕಾಏಕಿ ತೆರವು ಮಾಡಿರುವುದು ಅಪರಾಧ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈಗಾಗಲೇ ರಾಜ್ಯದಲ್ಲಿ ಕೇಸರಿ ಧ್ವಜ ಹಾಗೂ ಭಗವಾ ಧ್ವಜ ಕಂಡರೆ ಅವರಿಗೆ ಮೈಯೆಲ್ಲ ಉರಿಯುತ್ತದೆ. ಇದರ ಹಿನ್ನೆಲೆ ಮಂಡ್ಯದಲ್ಲಿಯೂ ಸಹ ಪರಿಸ್ಥಿತಿ ದೊಡ್ಡದಾಗಿದೆ. ಅದರಂತೆ ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿಯ ಘಟನೆಗೆ ಅಧಿಕಾರಿಗಳು ದಾರಿ ಮಾಡಿಕೊಡದೇ ಪಂಚಾಯತ್ ಸಭೆಯಲ್ಲಿ ತೀರ್ಮಾನವಾದಂತೆ ಅನಧಿಕೃತವಾಗಿ ನಾಮ ಫಲಕ 15 ದಿನದೊಳಗಾಗಿ ತೆರವಾಗಿದ್ದಲ್ಲಿ ತೆಂಗಿನಗುಂಡಿ ಬೀಚ ಬಳಿಯಲ್ಲಿ ವೀರ ಸಾವರ್ಕರ ಬೀಚ್ ಮತ್ತು ಭಗವಾ ಧ್ವಜವನ್ನು ಹಾಕಲಾಗುವುದು ಇದನ್ನು ತಡೆಯುವವರು ಮುಂದೆ ಬರಲಿ‌ ಎಂದು ಎಚ್ಚರಿಸಿದರು.

ನಂತರ ಮಾತನಾಡಿದ ಹೆಬಳೆ ಪಂಚಾಯತ ಅಧ್ಯಕ್ಷೆ ಪಾರ್ವತಿ ನಾಯ್ಕ ‘ತೆಂಗಿನಗುಂಡಿ ಬೀಚ್ ಬಳಿ ಹಾಕಿರುವ ಬೋರ್ಡ್ ತೆರವು ಮಾತ್ರ ಮಾಡಲಾಗುವುದು ಎಂದು ತಿಳಿಸಿದ ಪಿಡಿಓಗಳು ಏಕಾಏಕಿ
ಕಟ್ಟೆಯನ್ನು ಸಹ ತೆರವು ಮಾಡಿದ್ದು ಈ ಬಗ್ಗೆ ನನಗೆ ಕಟ್ಟೆ ತೆರವಿನ ಕುರಿತು ಗಮನಕ್ಕೆ ತಾರದೇ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಯಾವುದೇ ನೋಟಿಸ್ ನೀಡದೇ ಹಾಗೂ ಪಂಚಾಯತ್ ಅಧ್ಯಕ್ಷರಿಗೂ, ಸದಸ್ಯರ ಗಮನಕ್ಕೂ ತಾರದೆ ತೆರವುಗೊಳಿಸಿರುವುದಕ್ಕೆ ಅವರ ಮೇಲೆ‌ ಕ್ರಮಕ್ಕೆ ಆಗ್ರಹಿಸುತ್ತೇವೆ. ಈ ನಾಮಫಲಕ ಅಳವಡಿಕೆಯಲ್ಲಿ ಸಾರ್ವಜನಿಕರ ಯಾರದ್ದು ದೂರು ತಕರಾರು ಇಲ್ಲದೇ ಪಿಡಿಒಗಳು ತೆರವು ಮಾಡಿರುವುದು ಸರಿಯಲ್ಲ ಇದಕ್ಕೆ ಅಧ್ಯಕ್ಷ, ಸದಸ್ಯರ ವಿರೋಧ ಇದೆ ಎಂದರು.

ಈ ವೇಳೆ ಹೆಬಳೆ ಪಂಚಾಯತ ಸದಸ್ಯ ರಾಮ ಹೆಬಳೆ, ವೆಂಕಟೇಶ ನಾಯ್ಕ, ಮಂಜುನಾಥ ಗೊಂಡ, ವಿಜೇತ ಶೆಟ್ಟಿ, ಚಂದ್ರು ಗೊಂಡ, ಕುಪ್ಪು ಗೊಂಡ, ಮಾದೇವಿ ನಾಯ್ಕ, ಶಕುಂತಲಾ ಮೊಗೇರ, ಶೋಭಾ ನಾಯ್ಕ, ಬಿಜೆಪಿ ಪ್ರಮುಖರಾದ ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ, ರಾಘವೇಂದ್ರ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀಕಾಂತ ಕೆ. ನೇತ್ರತ್ವದಲ್ಲಿ ನಗರ ಠಾಣೆ ಸಿಪಿಐ ಹಾಗೂ ನಗರ ಮತ್ತು ಗ್ರಾಮೀಣ ಠಾಣಾ ಪಿಎಸ್ಐಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡಂತೆ ಬಂದೋಬಸ್ತ ಹಾಕಲಾಗಿತ್ತು.