ದಾಂಡೇಲಿಯ ಬೈಲುಪಾರು- ಐಪಿಎಂ ಸೇತುವೆಯಲ್ಲಿ ಮೊಸಳೆ ಪ್ರತ್ಯಕ್ಷ

ದಾಂಡೇಲಿ : ಒಂದೊಮ್ಮೆ ಕೈಗಾರಿಕಾ ನಗರಿಯಾಗಿ ಗಮನ ಸೆಳೆದಿದ್ದ ದಾಂಡೇಲಿ ಇತ್ತೀಚಿನ ವರ್ಷಗಳಿಂದ ಪ್ರವಾಸೋದ್ಯಮ ನಗರವಾಗಿಯೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದರ ಜೊತೆಯಲ್ಲಿ ನರಹಂತಕ ಮೊಸಳೆಗಳು ಮಾತ್ರ ದಾಂಡೇಲಿಗರನ್ನು ಬೆಚ್ಚಿಬಿಳಿಸಿರುವುದಂತೂ ವಾಸ್ತವ ಸತ್ಯ.

ಅಂದು ಹಾಗಿತ್ತು, ಇಂದು ಹೀಗಿತ್ತು ಎಂದು ಮುನ್ನೆಚ್ಚರಿಕೆ ಇಲ್ಲದೆ ನದಿಗಿಳಿದರೇ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ರೀತಿಯಲ್ಲಿ ಮೊಸಳೆಗಳು ಬೆಳೆಯತೊಡಗಿವೆ. ಪರಿಣಾಮವಾಗಿ ಐದಾರು ಸಾವು ಪ್ರಕರಣಗಳಿಗೆ ಮೊಸಳೆಗಳು ಕಾರಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ, ತಾಲೂಕಾಡಳಿತ, ನಗರಾಡಳಿತ ಸಾಕಷ್ಟು ಜನ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದೆ, ಮಾಡುತ್ತಿದೆ.

ಅರಣ್ಯ ಇಲಾಖೆ, ನಗರಾಡಳಿತ ಮತ್ತು ತಾಲೂಕಾಡಳಿತದ ಜಾಗೃತಿ ಕಾರ್ಯದಿಂದ ಸಾರ್ವಜನಿಕರು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬಹುದು. ಆದರೆ ಮೊಸಳೆಗಳಿಗೆ ಜಾಗೃತಿಯನ್ನು ಮೂಡಿಸುವವರು ಯಾರು?, ಮೂಡಿಸುವುದಾದರೂ ಹೇಗೆ‌ ಅಲ್ಲವೆ.

ಹಾಗಾಗಿಯೇ ನಗರದ ಬೈಲುಪಾರು-ಐಪಿಎಂ ಸೇತುವೆಯಲ್ಲಿ ತಡ ರಾತ್ರಿ ಮೊಸಳೆಯೊಂದು ಮುಂದೆ ಹೋಗುತ್ತಿರುವುದನ್ನು ಈ ದೃಶ್ಯದಲ್ಲಿ ಕಾಣಬಹುದು. ಇಲ್ಲೇ ಹತ್ತಿರ ಜನವಸತಿ ಪ್ರದೇಶ ಇರುವುದರಿಂದ ಇದೊಂದು ಅಪಾಯಕಾರಿ ಸೂಚನೆಯೂ ಹೌದು.

ಸ್ಥಳೀಯ ನಿವಾಸಿಗಳು ಬಹಳ ಎಚ್ಚರಿಕೆಯಿಂದ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯವಾಗಿದೆ. ಅನಾಹುತ ನಡೆದ ನಂತರ ಬೊಬ್ಬೆ ಹಾಕುವ ಬದಲು, ಅನಾಹುತ ನಡೆಯದಂತೆ ಮೊದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದೇ ಒಳಿತಲ್ಲವೆ.