ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶೀ ಲೀಗ್ ರಣಜಿ ಟ್ರೋಫಿ ಸೀಸನ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಯಾಂಕ್ ಅವರನ್ನು ಕೂಡಲೇ ತ್ರಿಪುರಾದ ಅಗರ್ತಲಾ ಎಎಲ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ವಾಸ್ತವಾಗಿ ತ್ರಿಪುರ ವಿರುದ್ಧ ರಣಜಿ ಪಂದ್ಯವನ್ನಾಡಿದ್ದ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ರೈಲ್ವೇಸ್ ವಿರುದ್ಧ ಗುಜರಾತ್ನ ಸೂರತ್ನಲ್ಲಿ ಆಡಬೇಕಿತ್ತು. ಉಭಯ ತಂಡಗಳ ಈ ಪಂದ್ಯ ಇದೇ ಫೆಬ್ರವರಿ 2 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಕರ್ನಾಟಕ ರಣಜಿ ತಂಡದ ಆಟಗಾರರು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ ನೀರು ಕುಡಿದ ಮಯಾಂಕ್ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮುಂದಿನ ರಣಜಿ ಪಂದ್ಯಕ್ಕಾಗಿ ಸೂರತ್ಗೆ ಪ್ರಯಾಣ ಬೆಳೆಸಲು ತಂಡದೊಂದಿಗೆ ವಿಮಾನವೇರಿದ್ದ ಮಯಾಂಕ್ ಅಗರ್ವಾಲ್ ವಿಮಾನದ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕೂಡಿದಿದ್ದಾರೆ. ಮಯಾಂಕ್ ನೀರು ಕುಡಿಯುತ್ತಿದ್ದಂತೆ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಹಾಗೆಯೇ ಬಾಯಿ, ನಾಲಿಗೆ ಸುಟ್ಟಂತ ಅನುಭವವಾಗಿದೆ. ಹೀಗಾಗಿ ಮಯಾಂಕ್ ಮಾತನಾಡಲು ಸಾಧ್ಯವಾಗದೆ ವಿಮಾನದಲ್ಲೇ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.