ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವುರ್ಲಿಯಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಮಂಜೂರಾದ ಕೊಠಡಿಯ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು, ಇದಕ್ಕೆ ಯಾರು ಹೊಣೆ ಎನ್ನುವಂತಾಗಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಗುದ್ದಲಿ ಪೂಜೆ ಮಾಡಿ ಗುತ್ತಿಗೆದಾರರು ಕಾಮಗಾರಿಯನ್ನು ಭರದಿಂದ ಪ್ರಾರಂಭ ಮಾಡಿದ್ದರು. ಅವರ ಕಾಮಗಾರಿಯ ಆಗಿನ ವೇಗ ನೋಡಿದರೆ ಇಷ್ಟೋತ್ತಿಗೆ ಶಾಲಾ ಕೊಠಡಿ ನಿರ್ಮಾಣಗೊಂಡು ಉದ್ಘಾಟನೆಯಾಗಬೇಕಿತ್ತು. ತಾಲೂಕಿನ ಹಾಗೂ ಅನ್ಯ ತಾಲೂಕಿನಲ್ಲಿ ಅದೇ ಸಮಯದಲ್ಲಿ ಮಂಜೂರಾದ ಕೊಠಡಿಗಳ ಉದ್ಘಾಟನೆಗಳು ಶಾಸಕರ ನೇತೃತ್ವದಲ್ಲಿ ಬಹುತೇಕ ಮುಗಿಯುತ್ತಾ ಬಂದಿದೆ. ಆದರೆ ಕಾಮಗಾರಿ ಪ್ರಾರಂಭವಾಗಿ 10-11ತಿಂಗಳು ಕಳೆದರೂ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿರುವುದು ಯಾವ ಕಾರಣಕ್ಕೆ ಎಂಬುದು ಗೋತ್ತಾಗುತ್ತಿಲ್ಲ. ಮೊದಲೇ ಶಾಲೆಯಲ್ಲಿ ಖಾಯಂ ಶಿಕ್ಷಕರು ಇಲ್ಲದೇ ಪಾಲಕರು, ಮಕ್ಕಳು ಪ್ರತಿಭಟನೆ ನಡೆಸಿದಾಗ ಒಬ್ಬ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡರೆ, ಪಾಲಕರಿಗೆ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನೂ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳು ಮಾತ್ರ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿಸದಿರುವುದು ಕಂಡು ಬರುತ್ತಿದೆ. ತಮ್ಮದೇ ಸಾಮ್ರಾಜ್ಯ ಎಂಬಂತೆ ವರ್ತನೆಯಲ್ಲಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಇಲಾಖೆಗೆ ಬಿಸಿ ಮುಟ್ಟಿಸುವ ಕಾರ್ಯ ಅಗತ್ಯ ಆಗಬೇಕಾಗಿದೆ. ಇಲ್ಲದೆ ಹೋದಲ್ಲಿ ಆರ್.ವಿ.ದೇಶಪಾಂಡೆ ಅವರು ಅತ್ಯಂತ ಕಾಳಜಿಯಿಂದ ತಂದ ಕಾಮಗಾರಿ, ಅನುದಾನಗಳಿಗೆ ಇಂತಹ ನಿರ್ಲಕ್ಷ್ಯ ಧೋರಣೆಯ ಅಧಿಕಾರಿಗಳೇ ಎಳ್ಳು ನೀರು ಬಿಡುವ ಸಾಧ್ಯತೆ ಸ್ಪಷ್ಟವಾಗತೊಡಗಿದೆ.