ಕೇಣಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಅಂಕೋಲಾ: ಕಲಬುರ್ಗಿಯ ಸೇಡಂನಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಲ್ಲಿನ ಕೇಣಿಯ ಸರ್ಕಾರಿ ಪ್ರೌಢಶಾಲೆ ವಿಧ್ಯಾರ್ಥಿಗಳು ನಗರ ಹಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಡಿಯಲ್ಲಿ ಸ್ಪರ್ಧೆ ನಡೆಸಲಾಗಿತ್ತು.

ವಿದ್ಯಾರ್ಥಿನಿಯರಾದ ಕುಮಾರಿ ಅಕ್ಷರಾ ಅರುಣ ಮಹಾಲೆ ಮತ್ತು ಜನ್ಮಿತಾ ಕಾಶೀನಾಥ ಹರಿಕಂತ್ರ ಇವರು ಸುಮಾರು 5 ತಿಂಗಳುಗಳ ಕಾಲ ಅಧ್ಯಯನ ನಡೆಸಿ ಸಿದ್ಧಪಡಿಸಿದ ಜೀವ ವೈವಧ್ಯತೆಯ ದೃಷ್ಟಿಯಲ್ಲಿ ಕಗ್ಗ ಭತ್ತದ ತಳಿ ಸಂರಕ್ಷಣೆ ಅನಿವಾರ್ಯ ಎಂಬ ವೈಜ್ಞಾನಿಕ ಸಂಶೋಧನಾ ಪ್ರಭಂದವನ್ನು ಸಿದ್ದಪಡಿಸಿ ಮಂಡಿಸಿದ್ದರು. ಕ್ರಿಯಾಶೀಲ
ವಿಜ್ಞಾನ ಶಿಕ್ಷಕರಾದ ಸುಧೀರ ನಾಯಕ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ್ದರು.
ಅಂಕೋಲಾ ಮತ್ತು ಕುಮಟಾ ಭಾಗದಲ್ಲಿ ಈ ಹಿಂದೆ ಹೇರಳವಾಗಿ ಬೆಳೆಯುತ್ತಿದ್ದ ಹಾಗೂ ಇಂದು ಕಣ್ಮರೆಯಾದ ಕಗ್ಗದ ತಳಿ ಸಂರಕ್ಷಣೆ ಕುರಿತು ಈ ಪ್ರೌಢಶಾಲೆಯ ಜಗದೀಶ್ ಚಂದ್ರ ಇಕೋ ಕ್ಲಬ್ ಅಡಿಯಲ್ಲಿ ಈ ಕಾರ್ಯ ಯೋಜನೆ ಹಮ್ಮಿಕೊಂಡಿದ್ದರು. ಕುಮಟಾ ತಾಲೂಕಿನಿಂದ ಕಗ್ಗ ಭತ್ತದ ಬೀಜ ತಂದು ಬಿತ್ತಿ ಬೆಳೆದು ಕಟಾವಣೆ ಮಾಡಿದ್ದಾರೆ. ಕಗ್ಗೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮದ ಮುಖಾಂತರ ಜಿಲ್ಲೆಯ ಕೃಷಿ ತಜ್ಞರ,ವಿಜ್ಞಾನಿಗಳ ಮುಖಾಂತರ ಜಾಗೃತಿ ಮೂಡಿಸಿದ್ದಾರೆ.


ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶಿ ಶಿಕ್ಷಕರನ್ನು ಉಪನಿರ್ದೇಶಕರಾದ (ಆಡಳಿತ)ಲತಾ ನಾಯಕ ಹಾಗೂ ಅಭಿವೃದ್ಧಿ ವಿಭಾಗದ ಉಪನಿರ್ದೇಶಕರಾದ ಎನ್.ಜಿ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಲಕ್ಷ್ಮಿ ಪಾಟೀಲ್ ,ಮುಖ್ಯ ಶಿಕ್ಷಕರಾದ ಚಂದ್ರಕಾಂತ ಗಾವಂಕರ್,ಶಿಕ್ಷಕ ವೃಂದದವರು,ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಸ್ ಚಂದ್ರನ್, ಸಾಗರ ವಿಜ್ಞಾನಿ ಡಾ. ವಿ.ಎನ್.ನಾಯಕ,ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ ಬಂಟ ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.ಮಾಜಿ ಲೋಕಸಭಾ ಸದಸ್ಯರಾದ ರಾಜಶೇಖರ್ ಪಾಟೀಲ್ ಸೇಡಂ ಪ್ರಶಸ್ತಿ ಪ್ರದಾನ ಮಾಡಿದರು.