ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜೋಯಿಡಾದಲ್ಲಿ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ

ಜೊಯಿಡಾ: ರಾಜ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಣಬಿ ಜನಾಂಗವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಪವಾಸ ಸತ್ಯಾಗ್ರಹದ ಜೊತೆಯಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರ ಅನಿವಾರ್ಯ ಆಗಲಿದೆ ಎಂದು ಜಿಲ್ಲಾ ಕುಣಬಿ ಸಮಾಜದಿಂದ ಜೋಯಿಡಾ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಯವರಿಗೆ ಶನಿವಾರ ಮನವಿ ನೀಡಲಾಗಿದೆ.

ಮನವಿಯಲ್ಲಿ ಕುಣಬಿ‌ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಕಳೆದ ವರ್ಷ ಜನವರಿ :20 ರಂದು ಜೋಯಿಡಾದಿಂದ ಕಾರವಾರದ ವರೆಗೆ 100 ಕಿ.ಮಿ. ಪಾದಯಾತ್ರೆ ಹೋರಾಟವನ್ನು‌ ಮಾಡಲಾಗಿತ್ತು. ಆದರೆ ಈವರೇಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ನಡೆದಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದ ವರದಿ ಕೇಂದ್ರದ ಆರ್.ಜಿ.ಐ ನಲ್ಲಿ 2017 ರಿಂದ ಕೊಳೆಯುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯವನ್ನು ಮುನ್ನೆಲೆಗೆ ತಂದಿತ್ತು. ಈಗ ಎಲ್ಲರೂ ಸುಮ್ಮನಾಗಿದ್ದಾರೆ. ಇನ್ನೂ ಮುಂದೆ ರಾಜಕೀಯದವರ ಡೊಂಗಿತನ ಸಹಿಸುವುದಿಲ್ಲ. ಕುಣಬಿಗಳನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ಮಾಡುವುದು ಮತ್ತು ಲೋಕಸಭೆ ಚುನಾವಣೆ ಬಹಿಷ್ಕಾರ ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಕುಣಬಿ ಸಮಾಜದಿಂದ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷ ಸುನಿಲ್ ಮಿರಾಶಿ, ಕಾರ್ಯದರ್ಶಿ ಚಂದ್ರಶೇಖರ ಸಾವರಕರ, ಹಿರಿಯ ಮುಖಂಡರಾದ ಮಾಬಳು ಕುಂಡಲಕರ, ದತ್ತಾ ಗಾವಡಾ, ಸುಭಾಷ್ ವೆಳಿಪ್, ಪಾಪು ಗಾವಡಾ, ರವಿ ಮಿರಾಶಿ, ಪರಶುರಾಮ ಗಾವಡಾ, ಶಂಕರ್ ವೆಳಿಪ್, ಪಾಂಡುರಂಗ ಗಾವಡಾ, ವಿನೋದ್ ವೇಳಿಪ್, ದಯಾನಂದ್ ಮಿರಾಶಿ, ಆಪ್ಪಣಾ, ಸುಭಾಷ್ ಶಿರವೋಳೆ, ನಾರಾಯಣ ಮೈನೊಳ ಮೊದಲಾದವರು ಉಪಸ್ಥಿತರಿದ್ದರು.