ಯಲ್ಲಾಪುರ: ಪ್ರಾಂತದ ಹವ್ಯಕ ಪ್ರತಿಭೆ ಗುರುತಿಸುವುದು, ಹವ್ಯಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿಬಿಂಬ
ಕಾರ್ಯಕ್ರಮವನ್ನು ಫೆ.11 ರಂದು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್ ಹೇಳಿದರು.
ಅವರು ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ
ಮೇಧಾಸೂಕ್ತ ಪಾರಾಯಣ, ಗಾಯತ್ರಿ ಜಪ,ಗಾಯತ್ರಿ ಹವನ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಹವ್ಯಕ ವಿದ್ಯಾ ಪ್ರೋತ್ಸಾಹಧನ ನೀಡಲಾಗುತ್ತದೆ. ಇದೇ ವೇಳೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ವಾನ್ ವಿಘ್ನೇಶ್ವರ ಭಟ್ಟ ಬಿಸಗೋಡ, ವಿದ್ವಾನ್ ಮಂಜುನಾಥ ಭಟ್ ಮೊಟ್ಟೆಗದ್ದೆ, ಡಾ. ಅಸ್ತಾಳ ಎನ್ ಎಸ್ ಭಟ್, ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ, ಕೃಷಿಕ ರಾಮಚಂದ್ರ ಹೆಗಡೆ ಕಂಚನಳ್ಳಿ, ಮದ್ದಲೆವಾದಕ ನರಸಿಂಹ ಹಂಡ್ರಮನೆ ಅವರನ್ನು ಸನ್ಮಾನಿಸಲಾಗುತ್ತದೆ.
ಗಾಯತ್ರಿ ಮಹತ್ವದ ಕುರಿತು ವಿದ್ವಾನ್ ನಾಗೇಂದ್ರ ಭಟ್ ಹಿತ್ಲಳ್ಳಿ, ಹವ್ಯಕ ಸಂಪ್ರದಾಯ ಕುರಿತು ವೇ. ಗಣಪತಿ ಭಟ್ಟ ಕೋಲಿಬೇಣ ಉಪನ್ಯಾಸ ನೀಡಲಿದ್ದಾರೆ. ಸಮಾರೋಪದಲ್ಲಿ ಸ್ವರ್ಣವಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮಹಾಸಭಾದ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ, ಪ್ರತಿಬಿಂಬ ಸಂಚಾಲಕ
ಅನಂತ ಗಾಂವ್ಕಾರ ಕಂಚಿಪಾಲ್, ಸದಸ್ಯತ್ವ ಅಭಿಯಾನದ ಸಂಚಾಲಕ ವಿ.ಟಿ ಹೆಗಡೆ ತೊಂಡೆಕೆರೆ ಇದ್ದರು.