ಬಾಲ್ಯ ಸ್ನೇಹಿತನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದೇಶಪಾಂಡೆ

ಹಳಿಯಾಳ : ಅವರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಾಲ್ಯದ ಗೆಳೆಯರು. ಒಟ್ಟಿನಲ್ಲಿ ಎಲ್ಲರ ಮುದ್ದಿನ ಮತ್ತು ತುಂಟಾಟದ ಗೆಳೆಯರಾಗಿ ಬೆಳೆದವರು. ಪ್ರಾಥಮಿಕ ಶಿಕ್ಷಣವನ್ನು ಒಂದೆ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಪೂರೈಸಿದವರು. ಇದ್ಯಾರಪ್ಪ ಅಂದ್ಕೊಂಡ್ರಾ.

ಅರ್ರೇ ಗೊತ್ತಾಗಿಲ್ವೇ, ಏನೇ ಇರ್ಲಿ, ವಿಷಯಕ್ಕೆ ಬರೋಣ. ಹಳಿಯಾಳ ಪಟ್ಟಣದ ಬಿ.ಕೆ.ಹಳ್ಳಿ ರಸ್ತೆಯಲ್ಲಿ ಬರುವ ಶಾಂತಿನಗರದ ನಿವಾಸಿ ಹಾಗೂ ಬಹುಕಾಲದ ಗೆಳೆಯ ಮಾತ್ರವಲ್ಲದೆ ಕ್ಲಾಸ್ಮೇಟ್ ಪ್ರಭಾಕರ್ ಪಾಟ್ನೆಕರ್ ಅವರ ಮನೆಗೆ ಭಾನುವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಭೇಟಿ ನೀಡಿ ಯೋಗ ಕ್ಷೇಮವನ್ನು ವಿಚಾರಿಸಿದರು.

ಅನಾರೋಗ್ಯದಿಂದಿರುವ ಪ್ರಭಾಕರ್ ಪಾಟ್ನೇಕರ್ ಅವರನ್ನು ಅವರ ಆರೋಗ್ಯವನ್ನು ವಿಚಾರಿಸಿದ್ದ ಆರ್.ವಿ.ದೇಶಪಾಂಡೆ ಅವರು ಮಾತು ಮಾತಿನಲ್ಲಿ ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಶಾಲೆಯ ಬ್ಯಾಗಿನಲ್ಲಿ ಪುಸ್ತಕದ ಜೊತೆಗೆ ಪೇರಳೆ, ಮಾವು ಹೀಗೆ ಇನ್ನಿತರ ಹಣ್ಣುಗಳನ್ನು ತಂದು ಹಂಚಿಕೊಂಡು ತಿನ್ನುತ್ತಿದ್ದ ನೆನಪುಗಳನ್ನು ದೇಶಪಾಂಡೆಯವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ರಜಾ ದಿನಗಳಲ್ಲಿ ದೇಶಪಾಂಡೆಯವರು ಪ್ರಭಾಕರ್ ಪಾಟ್ನೆಕರ್ ಅವರ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದದ್ದನ್ನು ನೆನಪಿಸಿಕೊಂಡರು.

ಬಾಲ್ಯದ ಗೆಳೆತನ ಈವರೆಗೂ ಮುಂದುವರೆದಿರುವುದು ಅವರಿಬ್ಬರ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಕೆಲ ಹೊತ್ತು ಆರ್.ವಿ.ದೇಶಪಾಂಡೆ ಅವರು ಪ್ರಭಾಕರ್ ಪಾಟ್ನೇಕರವರಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿ ಖುಷಿ ಖುಷಿಯಿಂದ ಇರುವಂತೆ ವಿನಂತಿಸಿದರು. ತಂದೆಯವರ ಆರೋಗ್ಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪುತ್ರ ಅನಿಲ್ ಪಾಟ್ನೇಕರ್ ಅವರ ಜೊತೆ ಕೆಲ ಹೊತ್ತು ದೇಶಪಾಂಡೆ ಅವರು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಭಾಕರ್ ಪಾಟ್ನೇಕರವರ ಪತ್ನಿ ಪ್ರಫುಲ್ಲಾ, ಪ್ರವಾಸೋದ್ಯಮಿಯಾಗಿರುವ ಪುತ್ರ ಅನಿಲ್ ಪಾಟ್ನೇಕರ್, ಅನಿಲ್ ಪಾಟ್ನೇಕರ್ ಅವರ ಪತ್ನಿ ಪ್ರಗತಿ, ಮಕ್ಕಳಾದ ಅನನ್ಯ ಮತ್ತು ಅಮೂಲ್ಯ, ಮಾವ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ಹನುಮಶೆಠ್, ಅಮಿತ್ ಹನುಮಶೇಠ್ ಉಪಸ್ಥಿತರಿದ್ದರು